ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ತೀರದಲ್ಲಿ ಐದಾರು ಹಳ್ಳಿಗಳಲ್ಲಿ ಸಂಭವನೀಯ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತದ ಸೂಚನೆ ಮೇರೆಗೆ ತಾಲೂಕಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಯಾವುದೇ ಪರಿಸ್ಥಿತಿ ಉಂಟಾದರೂ ಅದನ್ನು ಎದುರಿಸಲು ಸಿದ್ಧ ಎಂದು ತಹಸೀಲ್ದಾರ್ ಬಿ.ಎಸ್.ಕಡಕಭಾವಿ ತಿಳಿಸಿದರು.
ಪ್ರವಾಹ ಪರಿಸ್ಥಿತಿ ಸಂಬಂಧ ತಾಲೂಕಾಡಳಿತದಿಂದ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು, ಜಿಲ್ಲಾಧಿಕಾರಿಗಳು ಒಂದು ಬೋಟ್ ಕಳಿಸಿಕೊಟ್ಟಿದ್ದಾರೆ. 15 ಮಂದಿ ಎಸ್‌ಡಿಆರ್‌ಎಫ್ ತಂಡ ಬೆಂಗಳೂರಿನಿಂದ ಮುದ್ದೇಬಿಹಾಳ ತಾಲೂಕಿಗೆ ಆಗಮಿಸಿದೆ ಎಂದು ತಿಳಿದರು.
ಅಲ್ಲದೇ ಕಮಲದಿನ್ನಿ ಗ್ರಾಮದಲ್ಲಿ 53 ಕ್ವಿಂಟಾಲ್ ಅಕ್ಕಿ, 2 ಕ್ವಿಂಟಾಲ್ ಗೋಧಿ ದಾಸ್ತಾನು ಮಾಡಲಾಗಿದೆ. ಕುಂಚಗನೂರು ಗ್ರಾಮದಲ್ಲಿ 83 ಕ್ವಿಂಟಾಲ್ ಅಕ್ಕಿ, 3 ಕ್ವಿಂಟಾಲ್ ಗೋಧಿ ದಾಸ್ತಾನು ಮಾಡಲಾಗಿದ್ದು ಆಹಾರದ ಅಭಾವ ಎದುರಾದರೂ ಕಾಳಜಿ ಕೇಂದ್ರಗಳ ಮೂಲಕ ಪ್ರವಾಹದಿಂದ ತೊಂದರೆಗೊಳಾಗುವ ಜನರಿಗೆ ಆಹಾರ ಪೂರೈಕೆ ವ್ಯವಸ್ಥೆ ಮಾಡಲಾಗುವುದು ಎಂದರು.
ಸದ್ಯಕ್ಕೆ ಹೆಚ್ಚಿನ ಪ್ರಮಾಣದ ನೀರು ಆಲಮಟ್ಟಿ ಜಲಾಶಯದಿಂದ ಬಿಡುವ ಮಾಹಿತಿ ಲಭ್ಯವಿಲ್ಲ. ಒಂದು ವೇಳೆ 5 ಲಕ್ಷ ಕ್ಯೂಸೆಕ್ ಪ್ರಮಾಣದ ನೀರು ಹರಿಬಿಟ್ಟರೆ ಜನರನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ತಹಸೀಲ್ದಾರ್ ಕಡಕಭಾವಿ ತಿಳಿಸಿದರು. ಈ ವೇಳೆ ಆಹಾರ ನಿರೀಕ್ಷಕ ರಾಜು ಹಡಪದ, ಕಛೇರಿ ಸಿಬ್ಬಂದಿ ಸಂಜು ಜಾಧವ ಇದ್ದರು.