ವಿಜಯಪುರ : ಇಂದಿನಿಂದ ಪ್ರಾಥಮಿಕ ಶಾಲೆಗಳು ಆರಂಭಗೊಂಡಿವೆ. ಪ್ರತಿ ವರ್ಷ ಜೂನ್ 1ರಿಂದ ಆರಂಭವಾಗುತ್ತಿದ್ದವು. ಆದರೆ, ಈ ಬಾರಿ ಹದಿನೈದು ದಿನ ಮುಂಚಿತವಾಗಿಯೇ ಆರಂಭಗೊಂಡಿವೆ. ವಿಜಯಪುರ ನಗರದ ಶಿಕಾರಿಖಾನೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖುದ್ದು ಮುಖ್ಯಗುರುಗಳೇ ಪೊರೆಕೆ ಹಿಡಿದು ಶಾಲೆ ಆವರಣವನ್ನು ಸ್ವಚ್ಛಗೊಳಿಸಿ, ಮಕ್ಕಳನ್ನು ಸ್ವಾಗತಿಸಿದ್ದಾರೆ.
ಇಂದು ಶಾಲೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಶಾಲೆಯನ್ನು ಖುದ್ದು ಶಿಕ್ಷಕರು ಮುಂದೆ ನಿಂತು ತಳಿರು-ತೋರಣ, ರಂಗೋಲಿ ಬಿಡಿಸಿ ಶೃಂಗರಿಸಿ, ಮಕ್ಕಳನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಸ್ವಚ್ಛತೆ ತದನಂತರ ಶಾಲಾ ಮಕ್ಕಳನ್ನು ಹೂವು ನೀಡಿ ಬರ ಮಾಡಿಕೊಂಡರು. ಅಲ್ಲದೇ, ಹೆಡ್ ಮಾಸ್ಟರ್ ಜಗದೀಶ್ ಅಕ್ಕಿಗೆ ಶಾಲಾ ಆಡಳಿತ ಮಂಡಳಿ ಸದಸ್ಯರು ಸಾಥ್ ನೀಡಿದರು. ಇನ್ನು ಮಕ್ಕಳ ಸ್ವಾಗತಕ್ಕೆ ಶಾಲೆಯಲ್ಲಿ ತೆಂಗಿನಗರಿ ಕಟ್ಟಿ, ರಂಗೋಲಿ ಹಾಕಿ ಮುದ್ದು ಮಕ್ಕಳನ್ನು ಶಿಕ್ಷಕರು ಸ್ವಾಗತಿಸಿದರು.
ಜಿಲ್ಲೆಯಲ್ಲಿ ಒಟ್ಟು 1927 ಸರ್ಕಾರಿ ಪ್ರಾಥಮಿಕ ಶಾಲೆಗಳಿವೆ. ಇಲ್ಲಿ 2,56,587 ವಿದ್ಯಾರ್ಥಿಗಳು 1 ರಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಲು ಶಾಲೆಗೆ ದಾಖಲಾತಿ ಪಡೆದಿದ್ದಾರೆ. ಇವರಿಗೆ ಒಟ್ಟು 9050 ಶಿಕ್ಷಕರು ಬೋಧನೆ ಮಾಡಲಿದ್ದಾರೆ.
ಕೊಪ್ಪಳ : ಇಂದಿನಿಂದ ಶಾಲೆಗಳು ಪ್ರಾರಂಭ : ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಶಾಲೆಗೆ ಬಂದ ಮಕ್ಕಳನ್ನು ಶಿಕ್ಷಕರು ವಿಶೇಷವಾಗಿ ಸ್ವಾಗತಿಸಿದರು. ಕೊಪ್ಪಳ ನಗರದ ಸಿಪಿಎಸ್ ಶಾಲೆಯಲ್ಲಿ ಮಕ್ಕಳ ಮೇಲೆ ಹೂ ಹಾಕಿ, ಡೊಳ್ಳು ಬಾರಿಸುತ್ತಾ ಶಾಲೆಗೆ ಸ್ವಾಗತಿಸಿದರು. ರಂಗೋಲಿ ಹಾಕಿ ತಳಿರು-ತೋರಣದಿಂದ ಶಾಲೆಯ ಮುಂಭಾಗ, ಕೊಠಡಿಗಳನ್ನು ಸಿಂಗರಿಸಿದ್ದರು. ಶಾಲಾ ಆರಂಭದ ಮೊದಲ ದಿನ ಶಾಲೆಗೆ ಬೆರಳೆಣಿಕೆಯಷ್ಟು ಮಕ್ಕಳು ಹಾಜರಾಗಿದ್ದರು.
ಇದನ್ನೂ ಓದಿ: 'ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಮಕ್ಕಳನ್ನೇ ಆಸ್ತಿ ಮಾಡೋಣ': ಪೋಷಕರಿಗೆ ರಮೇಶ್ ಜಾರಕಿಹೊಳಿ ಪತ್ರ