ಮುದ್ದೇಬಿಹಾಳ(ವಿಜಯಪುರ): ತಾಲೂಕಿನ ಗೋನಾಳ ಎಸ್ಎಚ್ ಗ್ರಾಮದಲ್ಲಿ ರಾತ್ರೋರಾತ್ರಿ ಶ್ರೀಗಂಧ ಮರಗಳನ್ನು ಕತ್ತರಿಸಿ ಕಳವು ಮಾಡಿಕೊಂಡು ಹೋಗುವ ವಿಫಲ ಯತ್ನ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ರೈತರಾದ ಪೀರಪ್ಪ ಹಾಗೂ ಲಕ್ಷ್ಮಣ ನಾಯ್ಕೋಡಿ ಎಂಬ ಸಹೋದರರು ಸುಮಾರು 500 ಶ್ರೀಗಂಧದ ಮರಗಳನ್ನು ಬೆಳೆಸಿದ್ದಾರೆ. ಹೆಮ್ಮರವಾಗಿ ಬೆಳೆದ ಶ್ರೀಗಂಧದ ಮರಗಳನ್ನು ಕತ್ತರಿಸಿ ಕಳ್ಳತನ ಮಾಡುವ ಉದ್ದೇಶದಿಂದ ಮಂಗಳವಾರ ತಡರಾತ್ರಿ ಸುಮಾರು 10 ಜನ ಬೈಕ್ ಸಮೇತ ಜಮೀನಿಗೆ ನುಸುಳಿದ್ದಾರೆ.
ರಾತ್ರಿ ಜಮೀನಿನಲ್ಲಿ ಯಾರೂ ಇಲ್ಲ ಎಂಬುದನ್ನ ಗಮನಿಸಿದ ಕಳ್ಳರು ಶ್ರೀಗಂಧ ಮರದ ತುಂಡುಗಳನ್ನು ಕತ್ತರಿಸಿ ಒಂದೆಡೆ ಸಂಗ್ರಹಿಸಿದ್ದಾರೆ. ಕತ್ತರಿಸಿದ ತುಂಡುಗಳನ್ನು ಬೈಕ್ ಮೂಲಕ ಸಾಗಣೆ ಮಾಡುತ್ತಿದ್ದ ವೇಳೆ ಪಕ್ಕದಲ್ಲೇ ಇದ್ದ ಮಾಲೀಕ ಅನುಮಾನಗೊಂಡು ಬೈಕ್‌ಗಳನ್ನು ನಿಲ್ಲಿಸಿದ್ದ ಸ್ಥಳಕ್ಕೆ ಧಾವಿಸಿದ್ದಾನೆ. ಇದನ್ನು ಗಮನಿಸಿದ ಕಳ್ಳರು ಲಕ್ಷಾಂತರ ಮೌಲ್ಯದ ಶ್ರೀಗಂಧದ ತುಂಡುಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಮಾಲೀಕನ ಮೇಲೆ ಹಲ್ಲೆ: ಕಳ್ಳತನದ ವಿಫಲ ಯತ್ನಕ್ಕೆ ಆಕ್ರೋಶಗೊಂಡ ಕಳ್ಳರು ಜಮೀನು ಮಾಲೀಕನ ಮೇಲೆ ಕಲ್ಲುಗಳನ್ನು ಎಸೆದು ಗಾಯಗೊಳಿಸಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.
ಬೈಕ್ ಬಿಟ್ಟು ಪರಾರಿ: ಜಮೀನು ಮಾಲೀಕರು ಹಾಗೂ ಕಳ್ಳರ ಮಧ್ಯೆ ನಡೆದ ಜಟಾಪಟಿಯಲ್ಲಿ ರೈತನ ಮೇಲೆ ಹಲ್ಲೆ ಮಾಡಿ ನಂತರ ಅಡವಿ ಸೋಮನಾಳ ಮೂಲಕ ಬೈಕ್ನಲ್ಲಿ ಆಗಮಿಸುತ್ತಿದ್ದ ವೇಳೆ ಕಳ್ಳರ ವಿಷಯ ತಿಳಿದ ಸೋಮನಾಳ ಗ್ರಾಮಸ್ಥರು ಕಳ್ಳರನ್ನು ಹಿಡಿಯುವ ಉದ್ದೇಶದಿಂದ ರಸ್ತೆಯಲ್ಲಿ ಚಕ್ಕಡಿಗಳನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಈ ವೇಳೆ, ಗಾಮಸ್ಥರ ಕೈಗೆ ಸಿಕ್ಕು ಧರ್ಮದೇಟು ತಿಂದು ಸ್ಥಳದಲ್ಲೇ ಎರಡು ಬೈಕ್‌ಗಳನ್ನು ಬಿಟ್ಟು ಓಡಿಹೋಗಿದ್ದಾರೆ. ಎರಡೂ ಬೈಕ್‌ಗಳು ತಾಳಿಕೋಟಿ ಪೋಲೀಸರ ವಶದಲ್ಲಿದ್ದು ತಾಳಿಕೋಟಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.