ಮುದ್ದೇಬಿಹಾಳ : ಜಾತಿ, ಧರ್ಮ ಎನ್ನದೆ ಮೃತ ಕೊರೊನಾ ಸೋಂಕಿತರ ಶವಸಂಸ್ಕಾರವನ್ನು ಅವರದ್ದೇ ಪದ್ಧತಿಯಂತೆ ಮಾಡುವ ಮೂಲಕ ನಗರದ ಸಲಾಂ ಭಾರತ ಸೇವಾ ಟ್ರಸ್ಟ್ ಸಂಘಟನೆ ಮಾನವೀಯತೆ ಮೆರೆದಿದೆ.
ಕೋವಿಡ್ ಸೋಂಕು ಹರಡುವ ಭೀತಿಗೆ, ಮೃತ ಸೋಂಕಿತರ ಕುಟುಂಬಸ್ಥರು ಶವಸಂಸ್ಕಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಪ್ರಾಣವನ್ನು ಲೆಕ್ಕಿಸದೆ 'ಸಲಾಂ ಭಾರತ ಸೇವಾ ಟ್ರಸ್ಟ್ ಸಂಘಟನೆ' ಮಾನವೀಯ ಕಾರ್ಯ ಮಾಡುತ್ತಿದೆ.
ಪಿಪಿಇ ಕಿಟ್ ಧರಿಸಿ ಮುದ್ದೇಬಿಹಾಳ ಸರಕಾರಿ ಆಸ್ಪತ್ರೆಯಿಂದ ಮೃತದೇಹವನ್ನು ಕಾರ್‌ನಲ್ಲಿ ತೆಗೆದುಕೊಂಡು ಹೋಗಿ ಶವ ಸಂಸ್ಕಾರ ಮಾಡುತ್ತಿದ್ದಾರೆ.
ಟ್ರಸ್ಟ್ ಅಧ್ಯಕ್ಷ ಕೆ.ಕೆ.ಮುಲ್ಲಾ, ಕಾರ್ಯದರ್ಶಿ ಅಬ್ದುಲ್‌ವಾಜೀದ್ ಹಡಲಗೇರಿ, ಸೂರಜ್ ಸೋಷಿಯಲ್ ಗ್ರೂಪ್ ಅಧ್ಯಕ್ಷ ಮಹೆಬೂಬ ಹಡಲಗೇರಿ, ಮೌಲಾನಾ ಅಲ್ಲಾಬಕ್ಷ ಖಾಜಿ, ಸಮೀ ನಾಲಬಂದ, ಜಿಲಾನಿ ಮಕಾನದಾರ ಮೊದಲಾದವರು ಈ ಕಾರ್ಯದಲ್ಲಿ ತೊಡಗಿದ್ದಾರೆ.
ವಾಹನ ಒದಗಿಸಿದರೆ ಅನುಕೂಲ : ತಾಲೂಕಿನ ವ್ಯಾಪ್ತಿಯಲ್ಲಿ ಎಲ್ಲಿಯೇ ಆಗಲಿ ಕೋವಿಡ್‌ನಿಂದ ಸತ್ತವರ ಮೃತದೇಹದ ಅಂತ್ಯಕ್ರಿಯೆ ನಡೆಸಬೇಕಾದರೆ ನಮಗೆ ವಾಹನದ ಅನಾನುಕೂಲವಾಗುತ್ತಿದೆ.
ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯನ್ನು ಅವರ ಸ್ವಗ್ರಾಮಕ್ಕೆ ತೆಗೆದುಕೊಂಡು ಹೋಗಲು ತೊಂದರೆಯಾಗಿದೆ. ದಾನಿಗಳು ಮುಂದೆ ಬಂದರೆ ಅನುಕೂಲವಾಗಲಿದೆ ಎಂದು ಟ್ರಸ್ಟ್ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಸಹಾಯ ಬೇಕಾದವರು ಸಂಪರ್ಕಿಸಿ : ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯಲ್ಲಿ ಯಾವುದೇ ವ್ಯಕ್ತಿ ಕೊರೊನಾ ಸೋಂಕಿಗೆ ಬಲಿಯಾದರೆ ಮತ್ತು ಸೋಂಕಿತರ ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ನಿರಾಕರಿಸಿದರೆ ನಮಗೆ ಕರೆಮಾಡಿ ಎಂದು ಟ್ರಸ್ಟ್ ಮನವಿ ಮಾಡಿದೆ. ಸಂಪರ್ಕ-7411214368, 7259856255.