ವಿಜಯಪುರ: ಬೆಂಗಳೂರಿನಲ್ಲಿ ಉಚಿತ ಸೈನಿಕ ನೇಮಕಾತಿ ಪೂರ್ವಭಾವಿ ತರಬೇತಿ ಕೇಂದ್ರ ನಿರ್ಮಾಣಕ್ಕಾಗಿ ನಗರದ ನಿವೃತ್ತ ಯೋಧ ಭರತ್ ನಾಯ್ಡು ಎಂಬುವವರು ಕಾರ್ಗಿಲ್ ಯುದ್ಧ ಭೂಮಿಗೆ ಸೈಕಲ್ ಮೂಲಕ ತೆರಳಿ ಪವಿತ್ರ ಮಣ್ಣನ್ನು ತಂದಿದ್ದಾರೆ. ಸೇನೆ ಸೇರುವ ಯುವಕರಿಗೆ ಉಚಿತ ತರಬೇತಿ ನೀಡುವ ಸಲುವಾಗಿ ಉಚಿತ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಇವರು ಮುಂದಾಗಿದ್ದಾರೆ.
ಮೂಲತಃ ಇವರು ತುಮಕೂರು ಜಿಲ್ಲೆಯ ತುರುವೇಕೆರೆ ಗ್ರಾಮದವರು. ಭಾರತೀಯ ಸೇನೆಯಲ್ಲಿ 15 ವರ್ಷಕ್ಕೂ ಹೆಚ್ಚು ಕಾಲ ಬೇರೆ ಬೇರೆ ರಾಜ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ತಂದೆ ಚಂದ್ರಪ್ಪ ನಾಯ್ಡು ಸಹ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದವರು.
ಮಾರ್ಚ್ 9ರಂದು ಬೆಂಗಳೂರು ನಗರದ ಗುಡ್ಡೆ ಆಂಜನೇಯ ದೇವಸ್ಥಾನದಲ್ಲಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಇವರ ಸೈಕಲ್ ಯಾತ್ರೆಗೆ ಚಾಲನೆ ನೀಡಿದ್ದರು. ನಗರ ಜಿಲ್ಲಾಧಿಕಾರಿ, ಯೋಧ ನಮನ ಟೀಂ, ಮಾಜಿ ಸೈನಿಕರ ಬಳಗ ಸಹಕಾರದಿಂದ ಭರತ್ ಬೆಂಗಳೂರು ಟು ಕಾರ್ಗಿಲ್ ಯುದ್ಧ ಭೂಮಿಗೆ ಸೈಕಲ್ ಯಾತ್ರೆ ಶುರು ಮಾಡಿದ್ದರು.
ಇವರು ಚಿತ್ರದುರ್ಗ, ರಾಯಚೂರು, ಬೀದರ್ ಮೂಲಕ ಮಹಾರಾಷ್ಟ್ರ, ಜಾನ್ಸಿ, ಗ್ವಾಲಿಯರ್, ಮಥುರಾ, ಆಗ್ರಾ, ಉದಮ್ಮಪುರ, ಜಮ್ಮು, ಶ್ರೀನಗರ ಬಾಲಟಾಲ್ ಸೋನಾಮಾರ್ಗ ಮೂಲಕ ತೆರಳಿ ಕಾರ್ಗಿಲ್ ಯುದ್ಧ ಭೂಮಿ ತಲುಪಿದ್ದರು. ಬಳಿಕ ವೀರಭೂಮಿಯಿಂದ ಮಣ್ಣನ್ನು ತೆಗೆದುಕೊಂಡು ವಾಪಸ್ ಸೈಕಲ್ ಮೂಲಕವೇ ತಾಯ್ನಾಡಿಗೆ ಮರಳಿದ್ದಾರೆ.
ದಾರಿಯುದ್ದಕ್ಕೂ ಪ್ರತಿ ರಾಜ್ಯ, ಪ್ರತಿ ಗ್ರಾಮದಲ್ಲಿ ಇವರ ಅಭಿಮಾನಿಗಳು, ಜನರು ಜಯಘೋಷ ಕೂಗುತ್ತಾ ಸ್ವಾಗತಿಸಿದ್ದಾರೆ. ಪ್ರೀತಿಪೂರ್ವಕವಾಗಿ ಇವರ ಅನುಭವ ಕೇಳುತ್ತಾ ಹುರಿದುಂಬಿಸಿ ಬೀಳ್ಕೊಟ್ಟಿದ್ದಾರೆ. ಇವರ ಸಾಹಸ, ಶೌರ್ಯ ಮೆಚ್ಚಿ ವಿಜಯಪುರ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ಕಚೇರಿಗೆ ಬರಮಾಡಿಕೊಂಡು ಸನ್ಮಾನಿಸಿದ್ದಾರೆ.
ಇದನ್ನೂ ಓದಿ: ದೇಶದ ಗಡಿ ಸೇವೆಗೆ ಬೆಳಗಾವಿ ಮೂರು ತಲೆಮಾರಿನ ಕುಟುಂಬ ಅರ್ಪಣೆ: ಒಬ್ಬ ಕಾರ್ಗಿಲ್ ಯುದ್ಧದಲ್ಲಿ ಅಮರ!
ಯಾತ್ರೆಯ ಸಂದರ್ಭದಲ್ಲಿ ಆರ್ಮಿ, ಬಿಎಸ್ಎಫ್, ಸಿಐಎಸ್ಎಫ್, ಸಿಆರ್ಪಿಎಫ್, ಎಸ್ಎಸ್ಬಿ, ಇಂಡಿಯನ್ ನೇವಿ ಸೇರಿದಂತೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಕನ್ನಡಿಗ ಸೈನಿಕರನ್ನು ಭರತ್ ಭೇಟಿಯಾಗಿದ್ದಾರೆ. ಕಿರಿದಾದ ರಸ್ತೆ, ಬೆಟ್ಟ-ಗುಡ್ಡ, ಮಳೆ-ಗಾಳಿ, ಹಿಮಪಾತ ಇದ್ಯಾವುದಕ್ಕೂ ಅಂಜದೇ ಅಮರನಾಥ ಯಾತ್ರೆಯನ್ನೂ ಸಹ ಪೂರ್ಣಗೊಳಿಸಿದ್ದಾರೆ. ಪ್ರತಿನಿತ್ಯ ಬೆಳಗಿನ ಜಾವ 4 ಗಂಟೆಗೆ ಸೈಕಲ್ ಯಾತ್ರೆ ಆರಂಭಿಸಿ ಸುಮಾರು 6 ಗಂಟೆಗಳ ಕಾಲ ಸೈಕಲ್ ತುಳಿದಿರುವುದಾಗಿ ತಿಳಿಸಿದ್ದಾರೆ.
ಅರಣ್ಯ ಪ್ರದೇಶದಲ್ಲಿ ಇವರು ನೂರಕ್ಕೂ ಹೆಚ್ಚು ಕಿಲೋಮೀಟರ್ ಸೈಕಲ್ ತುಳಿದಿದ್ದಾರೆ. ವಿಜಯಪುರದಿಂದ ತೆರಳಿದ್ದು ಇಂದು ಬೆಂಗಳೂರು ತಲುಪಲಿದ್ದಾರೆ. ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ಬೆಂಗಳೂರಿನಲ್ಲಿ ಇವರನ್ನು ಸ್ವಾಗತಿಸಲು ಸಿದ್ಧತೆ ನಡೆದಿದೆ.