ಮುದ್ದೇಬಿಹಾಳ (ವಿಜಯಪುರ): ಕಳೆದ ಎಂಟು ತಿಂಗಳಿಂದ ಪಡಿತರ ಚೀಟಿಗೆ ಹೊಸದಾಗಿ ಸಲ್ಲಿಕೆಯಾಗುವ ಆನ್ಲೈನ್ ಅರ್ಜಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು ಪರದಾಡುವಂತಾಗಿದೆ. ಹೀಗಾಗಿ ಹೊಸದಾಗಿ ಪಡಿತರ ಚೀಟಿ ಪಡೆದುಕೊಳ್ಳಲು ಆನ್ಲೈನ್ ಅರ್ಜಿ ಸಲ್ಲಿಕೆಗೆ ಅನುಕೂಲ ಮಾಡಿಕೊಡಬೇಕೆಂದು ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.
ಪಟ್ಟಣದ ಮಿನಿವಿಧಾನಸೌಧದಲ್ಲಿ ತಹಶೀಲ್ದಾರ್ ಜಿ.ಎಸ್.ಮಳಗಿ ಅವರಿಗೆ ಮನವಿ ಸಲ್ಲಿಸಿದ ಸಂಘಟನೆಯ ಪದಾಧಿಕಾರಿಗಳು, ಸುಮಾರು ಎಂಟು ತಿಂಗಳಿಂದ ಪಡಿತರ ಚೀಟಿ ಆನ್ಲೈನ್ ಅರ್ಜಿ ಸ್ಥಗಿತಗೊಂಡಿದೆ. ಇದರಿಂದ ಬಡಜನತೆ ಪರದಾಡುವಂತಾಗಿದೆ. ಮತಕ್ಷೇತ್ರದ ಶಾಸಕರಾದ ಎ.ಎಸ್.ಪಾಟೀಲ್ ನಡಹಳ್ಳಿ ಅವರು ಕರ್ನಾಟಕ ಆಹಾರ ಸರಬರಾಜು ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಮಸ್ಯೆಯ ಬಗ್ಗೆ ತ್ವರಿತವಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕ್ಷೇತ್ರದ ಬಡವರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಸಾರ್ವಜನಿಕರಿಗೆ ಹೊಸದಾಗಿ ಪಡಿತರ ಚೀಟಿ ಪಡೆದುಕೊಳ್ಳಲು ಆನ್ಲೈನ್ ಅರ್ಜಿ ಸಲ್ಲಿಕೆಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಸರ್ಕಾರದ ಈ ನಿರ್ಧಾರ ಸಾವಿರಾರು ಬಡ ಕುಟುಂಬದವರಿಗೆ ಮತ್ತು ಗುಳೆ ಹೋಗಿ ಜೀವನ ನಡೆಸುತ್ತಿರುವ ಕಡುಬಡವರಿಗೆ ಕಂಟಕವಾಗಿದೆ. ಹೊಸ ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಅನಾನುಕೂಲವಾಗಿದ್ದು, ತಮ್ಮ ಕುಟುಂಬದ ಹೊಸ ಪಡಿತರ ಚೀಟಿ ಅರ್ಜಿ ತೆಗೆದುಕೊಳ್ಳಿ ಎಂದರೆ ತಹಶೀಲ್ದಾರ್, ವಿನಾಕಾರಣ ಕಾಲ ದೂಡುತ್ತಿದ್ದಾರೆ ಎಂದು ಮನವಿಯಲ್ಲಿ ದೂರಲಾಗಿದೆ.