ಮುದ್ದೇಬಿಹಾಳ: ಎಸ್.ಎಸ್.ಎಲ್.ಸಿ ಪರೀಕ್ಷೆಯ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಬಹಿರಂಗ ಘಟನೆಯನ್ನು ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಲು ಬಿದರಕುಂದಿ ಬಳಿ ಇರುವ ಆರ್ಎಂಎಸ್ಎ ಆದರ್ಶ ವಿದ್ಯಾಲಯದ ಸರ್ಕಾರಿ ಕಟ್ಟಡದಲ್ಲಿ ಕೇಂದ್ರ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಈ ಕುರಿತಾದ ವರದಿಯನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸಲ್ಲಿಸಲಾಗಿದೆ ಎಂದು ಧಾರವಾಡ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯದ ಜಂಟಿ ನಿರ್ದೇಶಕ, ಜಿಲ್ಲಾ ನೋಡಲ್ ಅಧಿಕಾರಿ ಗಜಾನನ ಮನ್ನಿಕೇರಿ ಹೇಳಿದರು.
ತಾಲೂಕಿನ ಢವಳಗಿ ಎಂ.ಬಿ.ಪಿ ಪರೀಕ್ಷಾ ಕೇಂದ್ರಕ್ಕೆ ಶುಕ್ರವಾರ ಭೇಟಿ ನೀಡಿ ಪರೀಕ್ಷಾ ವ್ಯವಸ್ಥೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪರೀಕ್ಷಾ ವ್ಯವಸ್ಥೆ ಹಾಳಾಗಿ ಜಿಲ್ಲೆಯ ಹೆಸರು ಕೆಡಲು ಕಾರಣವಾಗಿರುವ ಢವಳಗಿಯ ಎಂಬಿಪಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರವನ್ನು ರದ್ದುಪಡಿಸಲು ತಿಳಿಸಲಾಗಿದೆ. ಕೇಂದ್ರ ಬದಲಾವಣೆಯ ಚರ್ಚೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ನಡೆದಿದೆ. ನಾನೂ ಸಹಿತ ಪರೀಕ್ಷಾ ಕೇಂದ್ರ ರದ್ದತಿಗೆ ಶಿಫಾರಸು ಮಾಡುವಂತೆ ಬಿಇಓ ಮತ್ತು ಡಿಡಿಪಿಐಗೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.
ಬುಧವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಸಮಾಜ ವಿಜ್ಞಾನ ಪ್ರಶ್ನೆಪತ್ರಿಕೆ ಪರೀಕ್ಷೆ ಪ್ರಾರಂಭದ ನಂತರ ಹೊರಗಿನವರ ಮೋಬೈಲ್‍ನಲ್ಲಿ ಹರಿದಾಡಿದ ಘಟನೆಗೆ ಸಂಬಂಧಿಸಿದಂತೆ ಢವಳಗಿಯ ಎಂ.ಬಿ.ಪಾಟೀಲ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದ ಹಲವರ ತಲೆದಂಡವಾದ ಬೆನ್ನಲ್ಲೇ ಶುಕ್ರವಾರ ಹಿಂದಿ ಪರೀಕ್ಷೆಯನ್ನು ಅತ್ಯಂತ ಕಟ್ಟು ನಿಟ್ಟಾಗಿ, ಹೆಚ್ಚಿನ ಪೊಲೀಸ್ ಬಂದೋಬಸ್ತ್ನಲ್ಲಿ ನಡೆಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದರು.
ಬಿಇಓ ಎಚ್.ಜಿ.ಮಿರ್ಜಿ,ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಆರ್.ಚವ್ಹಾಣ ಅವರ ವಿಶೇಷ ಜಾಗೃತ ದಳದ ತಂಡವೂ ಕೇಂದ್ರದಲ್ಲೇ ಬೀಡು ಬಿಟ್ಟು ಹಿಂದಿನ ಅಹಿತಕರ ಘಟನೆ ಮರುಕಳಿಸದಂತೆ ಕಟ್ಟೆಚ್ಚರ ವಹಿಸಿದ್ದರು.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಚರ್ಚೆ: ರೇಸ್‌ನಲ್ಲಿ ಸಿ.ಟಿ.ರವಿ, ಶೋಭಾ ಕರಂದ್ಲಾಜೆ