ವಿಜಯಪುರ : ರಾಜ್ಯ ಸರ್ಕಾರ ಜಾರಿಗೊಳಿಸಿರುವ ವಿಕೇಂಡ್ ರಾತ್ರಿ ಕರ್ಫೂವನ್ನು ಉತ್ತರ ವಲಯ ವಿಭಾಗದಲ್ಲಿ ಸಮರ್ಥವಾಗಿ ಜಾರಿಗೊಳಿಸಿದ್ದೇವೆ. ಇದರ ಜತೆ ಮತ್ತೇನು ಹೆಚ್ಚುವರಿ ಕಠಿಣ ನಿಯಮ ಜಾರಿಗೊಳಿಸಬೇಕು ಎನ್ನುವ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಡಿಜಿಪಿ ಭಾಸ್ಕರ್ ರಾವ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿಯಮಗಳನ್ಜು ಕಟ್ಟುನಿಟ್ಟಾಗಿ ಹಾಗೂ ಮಾನವೀಯತೆ ಗಮನದಲ್ಲಿಟ್ಟುಕೊಂಡು ಮಾಡಬೇಕೆಂದು ಪೊಲೀಸ್ ಸಿಬ್ಬಂದಿಗೆ ತಿಳಿ ಹೇಳಿದ ಅವರು, ಕಾಳಸಂತೆಯಲ್ಲಿ ಔಷಧಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.
ಜನರನ್ನು ಯಾವುದೇ ಕಾರಣಕ್ಕೆ ಭಯದಲ್ಲಿ ಇರುವಂತೆ ಮಾಡಬಾರದು. ಜನರ ಮೇಲೆ ಬಲಪ್ರಯೋಗ ಮಾಡಬಾರದು. ಮಾನವೀಯತೆ ಜತೆ ಸರ್ಕಾರದ ನಿಯಮ ಪಾಲಿಸುವಂತೆ ಪ್ರೇರೇಪಿಸಬೇಕು ಎಂದು ಸೂಚನೆ ನೀಡಿದರು.
ವಾರ ಪೂರ್ತಿ ಲಾಕ್‌ಡೌನ್ ಜಾರಿ ವಿಚಾರ ಇನ್ನೂ ಸರ್ಕಾರದ ಮಟ್ಟದಲ್ಲಿದೆ. ಸರ್ಕಾರ ಅನುಮತಿ ನೀಡಿ ಹೊಸ ಮಾರ್ಗ ಸೂಚಿ ಘೋಷಿಸಿದ್ದು, ಆದೇಶವನ್ನು ಸಮರ್ಪಕವಾಗಿ ಜಾರಿಗೊಳಿಸಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ ಎಂದರು.
ಸಾಮಾಜಿಕ ಜಾಲತಾಣದಲ್ಲಿ ವಾಕ್ಸಿನ್ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ ಎಂಬ ದೂರಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಪಕ್ಕದ ಮಹಾರಾಷ್ಟ್ರದಿಂದ ಹೆಚ್ಚಿನ ಜನ ವಿಜಯಪುರ ಜಿಲ್ಲೆಗೆ ಆಗಮಿಸುತ್ತಿದ್ದಾರೆ.
ವಿಜಯಪುರಕ್ಕೆ ಬರುವ ಮುನ್ನವೇ ಸ್ಬ್ಯಾಬ್ ಟೆಸ್ಟ್ ಮಾಡಿಸಿಕೊಂಡು ನೆಗೆಟಿವ್ ವರದಿ ಪಡೆದುಕೊಂಡು ಬರಬೇಕು ಎಂದು ತಿಳಿಸಿದರು.