ವಿಜಯಪುರ : ಕಾಶ್ಮೀರ ಪಂಡಿತರ ಮೇಲೆ ನಡೆದ ದೌರ್ಜನ್ಯ ಹಾಗೂ ಕಾಶ್ಮೀರನ್ನು ಬಿಟ್ಟು ಓಡಿಸಿದ ಭಯೋತ್ಪಾದಕ ಕೃತ್ಯದ ಚಿತ್ರಣವನ್ನು ಸಿನಿಮಾ ರೂಪದಲ್ಲಿ ತಯಾರಿಸಿರುವ ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನು ಈಗಿನ ಯುವಪೀಳಿಗೆ ಹಾಗೂ ಎಲ್ಲ ವರ್ಗದವರು ನೋಡಬೇಕು ಎನ್ನುವ ಕಾರಣಕ್ಕೆ ಒಂದು ವಾರದ ಶೋವನ್ನು ಉಚಿತವಾಗಿ ಪ್ರರ್ದಶಿಸಲು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನಿರ್ಧರಿಸಿದ್ದಾರೆ.
ಈ ಕುರಿತು ನಗರದಲ್ಲಿ ಪ್ರತಿಕ್ರಿಯೆ ನೀಡಿರುವ ಶಾಸಕ ಯತ್ನಾಳ್, ಈ ಸಂಬಂಧ ಚಲನಚಿತ್ರ ಮಂದಿರದ ಮಾಲೀಕರ ಜತೆ ಮಾತುಕತೆ ನಡೆಸಿದ್ದು, ಒಂದು ವಾರಗಳ ಕಾಲ ಪ್ರತಿನಿತ್ಯ ಒಂದು ಶೋ ಉಚಿತವಾಗಿ ಪ್ರದರ್ಶಿಸಬೇಕು. ಅದಕ್ಕೆ ತಗಲುವ ಟಿಕೆಟ್ ವೆಚ್ಚವನ್ನು ತಾವೇ ಭರಿಸುವುದಾಗಿ ಘೋಷಿಸಿದ್ದಾರೆ.
ಕಾಶ್ಮೀರದಲ್ಲಿ ಜೀವಿಸುತ್ತಿದ್ದ ಕಾಶ್ಮೀರ ಪಂಡಿತರನ್ನು ಭಯೋತ್ಪಾದಕರು ನಡೆಸಿಕೊಂಡ ರೀತಿಯನ್ನು ನಿರ್ದೇಶಕರು ಚಿತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ಪರಿಸ್ಥಿತಿ ಒಂದು ದಿನ ನಮಗೂ ಬರಬಹುದು. ಹೀಗಾಗಿ, ಜನತೆ ಈಗಲೇ ಎಚ್ಚೆತ್ತು ಈ ಸಿನಿಮಾ ಸ್ಪೂರ್ತಿಯಾಗಲಿದೆ ಎಂದರು.
ಪ್ರಧಾನಿ ಮೋದಿ ಸಹ ಚಿತ್ರವನ್ನು ನೋಡಲಿದ್ದಾರೆ. ಈ ಚಿತ್ರ ಎಲ್ಲ ದೇಶ ಪ್ರೇಮಿಗಳಿಗೆ ತಲುಪಲಿ ಎನ್ನುವ ಉದ್ದೇಶದಿಂದ ಮುಂದಿನ ವಾರದಿಂದ ಒಂದು ವಾರ ಪ್ರತಿದಿನ ಒಂದು ಶೋ ಉಚಿತ ಪ್ರದರ್ಶನ ಮಾಡಲು ನಿರ್ಧರಿಸಲಾಗಿದೆ. ತಾವು ಸಮಯ ಮಾಡಿಕೊಂಡು ಚಿತ್ರವನ್ನು ವೀಕ್ಷಿಸುವುದಾಗಿ ಹೇಳಿದರು.