ಮುದ್ದೇಬಿಹಾಳ : ಜಮ್ಮು ಮತ್ತು ಕಾಶ್ಮೀರದಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ವಿದ್ಯುತ್ ಅವಘಡದಲ್ಲಿ ಹುತಾತ್ಮರಾಗಿದ್ದ ತಾಲೂಕಿನ ಬಸರಕೋಡದ ಯೋಧ ಶಿವಾನಂದ ಬಡಿಗೇರ ಅವರ ಸ್ಮಾರಕ ನಿರ್ಮಾಣಕ್ಕೆ ಕೊನೆಗೂ ಮಹೂರ್ತ ಕೂಡಿ ಬಂದಿದೆ.
ಯೋಧನ ಸಮಾಧಿಗೆ ಕಣ್ಣೀರಿನ ನಮನ : ಹುತಾತ್ಮ ಯೋಧ ಶಿವಾನಂದ ಬಡಿಗೇರ ಅವರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲು ಆಗಮಿಸಿದ್ದ ವೇಳೆ ಅವರ ತಾಯಿ ರತ್ನಮ್ಮ ಬಡಿಗೇರ ಭಾವುಕರಾಗಿ ಕಣ್ಣೀರು ಸುರಿಸುತ್ತಲೇ ಮಗನ ಸಮಾಧಿಗೆ ನಮಿಸಿದರು.
ಯೋಧನ ಸಮಾಧಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕುರಿತು ಜ.7ರಂದು ಈಟಿವಿ ಭಾರತ್ನಲ್ಲಿ 'ಹುತಾತ್ಮ ಯೋಧ ಶಿವಾನಂದ ಬಡಿಗೇರ ಸಮಾಧಿ ಬಳಿ ಸ್ಮಾರಕ ನಿರ್ಮಾಣ ಯಾವಾಗ'? ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಬಿತ್ತರವಾಗಿತ್ತು.
ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಸ್ಮಾರಕ ನಿರ್ಮಾಣಕ್ಕೆ ವಿಳಂಬವಾಗುತ್ತಿರುವ ಕುರಿತು ಯೋಧನ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿದ್ದರು.
ಓದಿ: ಹುತಾತ್ಮ ಯೋಧ ಶಿವಾನಂದ ಬಡಿಗೇರ ಸಮಾಧಿ ಬಳಿ ಸ್ಮಾರಕ ನಿರ್ಮಾಣ ಯಾವಾಗ?
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಯೋಧನ ಸಮಾಧಿ ದುಃಸ್ಥಿತಿ ಕಂಡು ಕೂಡಲೇ ತಮ್ಮ ಆಪ್ತರಾದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರಿಗೆ ಸೂಚಿಸಿ ಸಮಾಧಿಗೆ ಕಾಯಕಲ್ಪ ನೀಡಲು ಸೂಚನೆ ನೀಡಿದ್ದಾರೆ.
ಅಲ್ಲದೇ, ಅಲ್ಲಿ ಸ್ಮಾರಕದ ಬಳಿ ಯೋಧನ ಪುತ್ಥಳಿ ಅನಾವರಣಕ್ಕೆ ತಗಲುವ ಖರ್ಚು ನೀಡುವುದಾಗಿ ತಿಳಿಸಿದ್ದಾರೆ ಎಂದು ಅವರ ಆಪ್ತರಾದ ಪ್ರಭುಗೌಡ ದೇಸಾಯಿ ಹೇಳಿದರು.