ವಿಜಯಪುರ: ರಾಜ್ಯದಲ್ಲಿ ಅನೈತಿಕ ಸರ್ಕಾರವಿದೆ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಹೇಳಿಕೆಗೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ ಟಾಂಗ್ ನೀಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಅನೈತಿಕ ಎಂಬ ಪದದ ಅರ್ಥ ಗೊತ್ತಿದೆಯಾ? ಸಿದ್ದರಾಮಯ್ಯ ಮತ್ತು ಡಿಕೆಶಿಗಾಗಲಿ ಯಾವ ನೈತಿಕತೆ ಇದೆ, ಅವರ ಪಾರ್ಟಿಯಲ್ಲಿ ಏನು ನೀತಿ ಇದೆ, ಅನೈತಿಕ ಎಂಬುದು ಕಾಂಗ್ರೆಸ್ಗೆ ಮಾತ್ರ ಅನ್ವಯಿಸುವ ಶಬ್ದ. ನಾವು ನೀತಿ ಸಿದ್ಧಾಂತದ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಒಂದು ಪಾರ್ಟಿ, ಕೇರಳದಲ್ಲಿ ಮತ್ತೊಂದು ಪಾರ್ಟಿ, ಮಹಾರಾಷ್ಟ್ರದಲ್ಲಿ ಇನ್ನೊಂದು ಪಾರ್ಟಿಯಂತ ಇವರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಇವರಿಗೆ ಯಾವ ನೈತಿಕತೆ ಇದೆ. ಮೊದಲು ಇನ್ನೊಂದು ಸಲ ಸರಿಯಾಗಿ ಡಿಗ್ರಿ ಮಾಡಲಿ. ಫಿಲಾಸಫಿ, ಅನೈತಿಕತೆ ಸೇರಿದಂತೆ ಇವೆಲ್ಲದರ ಬಗ್ಗೆ ತಿಳಿದುಕೊಳ್ಳಲಿ ಎಂದು ರವಿಕುಮಾರ ಟಾಂಗ್ ಕೊಟ್ಟರು.
ಸಿದ್ದು ಅಭ್ಯರ್ಥಿ ಗೆಲ್ಲುವುದಿಲ್ಲ: ರಾಜ್ಯಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯರ ಅಭ್ಯರ್ಥಿ ಗೆಲ್ಲುವುದಿಲ್ಲ. ಅಲ್ಪಸಂಖ್ಯಾತರಿಗೆ ಆಸೆ ತೋರಿಸಿ ಮೋಸ ಮಾಡುವುದಕ್ಕೆ ಈ ತಂತ್ರ ರೂಪಿಸಿದ್ದಾರೆ. ಅಲ್ಪಸಂಖ್ಯಾತರಿಗೆ ಮೊದಲನೇ ಸೀಟು ಯಾಕೆ ಕೊಡಲಿಲ್ಲ. ಯಾರೂ ವೋಟ್ ಹಾಕದಿದ್ದರೂ ಅಲ್ಪಸಂಖ್ಯಾತರು ಕಾಂಗ್ರೆಸ್ಗೆ ವೋಟ್ ಹಾಕುತ್ತಾರೆ. ಆದ್ರೆ ಕಾಂಗ್ರೆಸ್ನಲ್ಲಿ ಅಲ್ಪಸಂಖ್ಯಾತರನ್ನ ಯೂಸ್ ಅಂಡ್ ಥ್ರೋ ಮಾಡಲು ಇಟ್ಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ರವಿಕುಮಾರ ವಾಗ್ದಾಳಿ ನಡೆಸಿದರು.