ವಿಜಯಪುರ: ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ರಾಜನಾಳ ಕೆರೆ ಸುಮಾರು 20 ವರ್ಷಗಳ ನಂತರ ಭರ್ತಿಯಾದ ಹಿನ್ನೆಲೆ ಗ್ರಾಮಸ್ಥರು ಕೆರೆಗೆ ಭಾನುವಾರ ಪೂಜೆ ಸಲ್ಲಿಸಿದರು.
ಕೃಷ್ಣಾ ನದಿಯಿಂದ ಮುಳವಾಡ ಏತ ನೀರಾವರಿ 3ನೇ ಹಂತದಿಂದ ತಿಡಗುಂದಿ ಶಾಖಾ ಕಾಲುವೆ ಪೈಪಲೈನ್ ಮೂಲಕ ರಾಜನಾಳ ಕೆರೆಗೆ ನೀರು ಹರಿಸಿ ತುಂಬಿಸಲಾಗಿದೆ. ಸುಮಾರು 260 ಎಕರೆ ಪ್ರದೇಶದಲ್ಲಿರುವ ರಾಜನಾಳ ಕೆರೆ ಭರ್ತಿಯಿಂದ ಸುತ್ತಮುತ್ತಲಿನ 15 ರಿಂದ20 ಗ್ರಾಮಗಳ 14.500 ಹೆಕ್ಟರ್ ಪ್ರದೇಶಕ್ಕೆ ನೀರು ಸಿಗುವಂತಾಗಿದೆ.
ಕೆರೆಗೆ ಭಾಗಿನ ಅರ್ಪಿಸಿ ಮಾತನಾಡಿದ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ 100 ಕೋಟಿ ವೆಚ್ಚದಲ್ಲಿ ಕೆರೆಗೆ ನೀರು ತುಂಬಿಸು ಕೆಲಸ ನಡೆದಿದೆ, ಇದರಿಂದ ಅಂತರ್ಜಲದ ಮಟ್ಟ ಹೆಚ್ಚಾಗಿ ಸುತ್ತಮುತ್ತಲಿನ 15 ಗ್ರಾಮಗಳಿಗೆ ಅನುಕೂಲವಾಗಲಿದೆ, ಕೆರೆಯನ್ನು ರಕ್ಷಿಸುವ ಜವಾಬ್ದಾರಿ ಗ್ರಾಮಸ್ಥರ ಮೇಲಿದೆ ಕೆರೆಯನ್ನು ಕಲುಷಿತವಾಗದ ರೀತಿಯಲ್ಲಿ ನೋಡಿಕೊಂಡರೆ ರೈತರು ಸಮೃದ್ದರಾಗುತ್ತಾರೆ ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ ಹಿಂದೆ ದನಕಾಯುವರಿಗೂ ಉದ್ಯೋಗ ಕೊಡಿಸಿದ್ದೆ, ಈಗ ಕಾಲ ಬದಲಾಗಿದೆ. ನೌಕರಿ ಆಸೆ ಬಿಡಿ ಗ್ರಾಮಕ್ಕೆ ನೀರಾವರಿ ಸೌಲಭ್ಯ ದೊರೆತಿದ್ದು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡಿದರು.
ಜನಪ್ರತಿನಿಧಿಗಳನ್ನು ಟ್ಯಾಕ್ಟರ್ ಮೇಲೆ ಗ್ರಾಮದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಸುಮಾರು 500 ಮಹಿಳೆಯರು ಕುಂಭಹೊತ್ತು ಅದ್ದೂರಿಯಾಗಿ ಸ್ವಾಗತ ಕೋರಿ, ಕೆರೆ ತುಂಬಲು ಕಾರಣರಾದ ಎಲ್ಲ ಜನಪ್ರತಿನಿಧಿಗಳಿಗೆ ಸನ್ಮಾನಿಸಿದರು. ಇನ್ನು ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಸಂಸದ ರಮೇಶ ಜಿಗಜಿಣಗಿ ಹಾಗೂ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಭಾಗವಹಿಸಿದ್ದರು.
ಇದನ್ನೂ ಓದಿ:ರಾಹುಲ್ ಗಾಂಧಿಗೆ ಜನರ ಜೀವಕ್ಕಿಂತ ಜೋಡೋ ಯಾತ್ರೆ ಮುಖ್ಯವಾಗಿದೆ: ಕಾರಜೋಳ ಕಿಡಿ