ಮುದ್ದೇಬಿಹಾಳ(ವಿಜಯಪುರ) : ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ನಡೆಯದಂತೆ ಕ್ರಮಕೈಗೊಳ್ಳುವ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಲು ಸಂಘ ಸಂಸ್ಥೆಗಳು,ಪ್ರಮುಖ ವ್ಯಾಪಾರಿ ಸಂಘಟನೆಯವರು ಸಹಕಾರ ನೀಡಬೇಕು ಎಂದು ಮುದ್ದೇಬಿಹಾಳ ಪಿಎಸ್ಐ ಮಲ್ಲಪ್ಪ ಮಡ್ಡಿ ಮನವಿ ಮಾಡಿದ್ದಾರೆ.
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣ ಪಂಚಾಯತಿಯಲ್ಲಿ ನಡೆದ ವ್ಯಾಪಾರಸ್ಥರು, ಸಂಘ ಸಂಸ್ಥೆ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮುದ್ದೇಬಿಹಾಳ ಹಾಗೂ ನಾಲತವಾಡದಲ್ಲಿ ಸಾರ್ವಜನಿಕವಾಗಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವುದರಿಂದ ಅದೆಷ್ಟೋ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಿದೆ ಎಂದರು.
ಸಿಸಿಟಿವಿ ಅಳವಡಿಕೆಗೆ ತಗಲುವ ವೆಚ್ಚವನ್ನು ವ್ಯಾಪಾರಸ್ಥರು,ಗಣ್ಯ ವ್ಯಕ್ತಿಗಳು ನೀಡಲು ಮುಂದಾಗಬೇಕು. ನಾಲತವಾಡದಲ್ಲಿ ಈಗಾಗಲೇ 41 ಸೂಕ್ಷ್ಮ ಸ್ಥಳಗಳನ್ನು ಸಿಸಿ ಕ್ಯಾಮರಾ ಅಳವಡಿಕೆಗೆ ಗುರುತಿಸಲಾಗಿದ್ದು ಈ ಬಗ್ಗೆ ಪರಿಶೀಲನೆ ಕೂಡಾ ಮಾಡಲಾಗಿದೆ ಎಂದರು.
ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ.ಆರ್.ದಾಯಿ, ಜೆಡಿಎಸ್ ಪಕ್ಷದ ಮುಖಂಡ ಶಂಕರರಾವ ದೇಶಮುಖ, ಬಸಣ್ಣ ವಡಗೇರಿ,ಕೆ.ಆರ್.ಎತ್ತಿನಮನಿ, ಶ್ರೀಕಾಂತ ಹಿರೇಮಠ,ಗುರುನಾಥ ಡಿಗ್ಗಿ,ಶರಣಗೌಡ ಪಾಟೀಲ,ಸಿದ್ದಪ್ಪ ಕಟ್ಟಿಮನಿ,ಸಿದ್ದಪ್ಪ ಆಲಕೊಪ್ಪರ,ಮಹಾಂತೇಶ ಗಂಗನಗೌಡರ, ನಜೀರ್ ಕೊಣ್ಣೂರ.ಪೊಲೀಸ್ ಇಲಾಖೆಯ ಶ್ರೀಕಾಂತ ಬಿರಾದಾರ ಮತ್ತಿತರರು ಇದ್ದರು.