ವಿಜಯಪುರ: ಜಿಲ್ಲೆಯ ಕೊಲ್ಹಾರ ಪಟ್ಟಣದ ರಸ್ತೆಗಳು ಹಾಳಾಗಿದ್ದು, ದುರಸ್ತಿ ಕಾರ್ಯ ನಡೆಯುತ್ತಿಲ್ಲ. ಜೊತೆಗೆ ಮೂಲಭೂತ ಸೌಕರ್ಯಗಳು ಇಲ್ಲದಂತಾಗಿದೆ ಎಂದು ಆರೋಪಿಸಿ ನ್ಯಾಯ ಕ್ರಾಂತಿ ಸಂಘದ ಸದಸ್ಯರು ಪಟ್ಟಣ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕೊಲ್ಹಾರ ಪಟ್ಟಣ ಪಂಚಾಯತಿ ಪ್ರವೇಶದ ದ್ವಾರದಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪಟ್ಟಣದ ರಸ್ತೆಗಳು ಹಾಳಾಗಿ, ಕೆರೆಗಳಾಗಿವೆ. ಯಾವುದೇ ಮೂಲ ಸೌಕರ್ಯಗಳು ಇಲ್ಲ ಎಂದು ಆರೋಪಿಸಿದರು.
ಕೂಡಲೇ ಅಧಿಕಾರಿಗಳು ರಸ್ತೆ ದುರಸ್ತಿ ಕಾರ್ಯ ಆರಂಭಿಸಬೇಕು ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವಿ ಶಿರಗುಪ್ಪಿ ಜೊತೆಗೆ ವಾಗ್ವಾದ ನಡೆಸಿದರು. ಬಳಿಕ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.