ವಿಜಯಪುರ: ಕೊರೊನಾ ವೈರಸ್ ಭೀತಿಯಿಂದ ಜಿಲ್ಲೆಯ ತಾಲೂಕು ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರು ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದು, ಇದರಿಂದಾಗಿ ಗರ್ಭಿಣಿಯರು ತಪಾಸಣೆಗಾಗಿ ಪರಿತಪಿಸುವಂತಾಗಿದೆ.
ಈ ಬಗ್ಗೆ ಆರೋಗ್ಯಾಧಿಕಾರಿಗಳನ್ನ ಕೇಳಿದ್ರೆ, ಕೊರೊನಾದಿಂದ ಸ್ವಲ್ಪ ತೊಂದರೆಯಾಗಿರಬಹುದು. ಆದರೆ, ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯುತ್ತಿದೆ ಎನ್ನುತ್ತಿದ್ದಾರೆ.
2019ರ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ 8,279 ಗರ್ಭಿಣಿಯರ ನೋಂದಣಿಯಾಗಿತ್ತು. ಆದರೆ, ಈ ವರ್ಷದ ಏಪ್ರಿಲ್-ಮೇ ತಿಂಗಳಲ್ಲಿ 9,429 ಗರ್ಭಿಣಿಯರ ನೋಂದಣಿಯಾಗಿದೆ. ಆದರೆ, ಈ ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಜಿಲ್ಲೆಯಲ್ಲಿ 2019ರ ಏಪ್ರಿಲ್-ಮೇ ತಿಂಗಳಲ್ಲಿ ಒಟ್ಟು 6,398 ಹೆರಿಗೆಗಳಾಗಿವೆ. ಇದರರಲ್ಲಿ 3,631 ಹೆರಿಗೆಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ 2,767 ಹೆರಿಗೆಗಳು ಖಾಸಗಿ ಆಸ್ಪತ್ರೆಗಳಲ್ಲಿ ಆಗಿದ್ದವು. 2020ರ ಲಾಕ್‌ಡೌನ್ ಅವಧಿಯ ಏಪ್ರಿಲ್-ಮೇ ತಿಂಗಳಲ್ಲಿ ಒಟ್ಟು 6,280 ಮಹಿಳೆಯರು ಹೆರಿಗೆಗಳಾಗಿವೆ. ಅವುಗಳ ಪೈಕಿ ಸರ್ಕಾರಿ ಆಸ್ಪತ್ರೆಗಳಲ್ಲಿ 4,442 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 1,838 ಆಗಿವೆ. ಲಾಕ್‌ಡೌನ್ ಅವಧಿಯಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಬಂದ್ ಆಗಿರುವ ಪರಿಣಾಮ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಹೆರಿಗೆಗಳಾಗಿವೆ.
ಗರ್ಭಿಣಿಯರ ಸಮಸ್ಯೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳಿದರೆ, ಗರ್ಭಿಣಿಯರ ಪರದಾಟ ಕುರಿತು ನನ್ನ ಗಮನಕ್ಕೂ ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.