ಮುದ್ದೇಬಿಹಾಳ : ಕೆಲ ದಿನಗಳ ಹಿಂದೆ ರೈತನ ಕಣ್ಣಿಗೆ ಬಿದ್ದು ಆತಂಕ ಮೂಡಿಸಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಗ್ರಾಮಸ್ಥರು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ.
ತಾಲೂಕಿನ ಚಲಮಿ ಗ್ರಾಮದ ರೈತ ಹಣಮಂತಪ್ಪ ಗಂಗೂರ ಎಂಬುವವರ ಜಮೀನಿನಲ್ಲಿದ್ದ ಬಾವಿಯೊಳಗೆ ಮೊಸಳೆ ಕಂಡು ಬಂದಿತ್ತು. ತಕ್ಷಣ ರೈತ ಪೊಲೀಸರಿಗೆ ವಿಷಯ ತಿಳಿಸಿದ್ದರು. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರೊಂದಿಗೆ ಕಾರ್ಯಾಚರಣೆ ನಡೆಸಿ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ.
ಬಳಿಕ ಸಹಾಯಕ ಅರಣ್ಯಾಧಿಕಾರಿ ಮಲ್ಲಪ್ಪ ತೇಲಿ ಮಾತನಾಡಿ, ಅಂದಾಜು ಏಳು ವರ್ಷದ ಮೊಸಳೆ ಇದಾಗಿದ್ದು, ರೈತನ ಜಮೀನಿನ ಸಮೀಪದಲ್ಲಿ ಹಳ್ಳ ಇದ್ದು, ಅಲ್ಲಿಂದ ಬಂದು ಬಾವಿಗೆ ಬಿದ್ದಿರಬಹುದು. ಈ ಮೊಸಳೆಯನ್ನು ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬಿಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ರಾಜು ಬಿರಾದಾರ, ಸಹಾಯಕ ಅರಣ್ಯಾಧಿಕಾರಿ ಮಲ್ಲಪ್ಪ ತೇಲಿ,ಈಶ್ವರಯ್ಯ ಹಿರೇಮಠ ಮೊದಲಾದವರು ಇದ್ದರು.