ವಿಜಯಪುರ : ಜಿಲ್ಲೆಯಲ್ಲಿ ನಿರ್ಬಂಧಿತ ಪ್ರದೇಶ ಹೊರತು ಪಡಿಸಿ ಉಳಿದೆಡೆ ನಾಳೆಯಿಂದ ವ್ಯಾಪಾರ, ವಹಿವಾಟಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಗಡಿಭಾಗವಾಗಿರುವ ಇಂಡಿ, ಚಡಚಣ ತಾಲೂಕುಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಮಹಾರಾಷ್ಟ್ರದೊಂದಿಗೆ ಗಡಿ ಹೊಂದಿಕೊಂಡಿರುವುದರಿಂದ ಒಂದು ವಾರ ಲಾಕ್‌ಡೌನ್ ಸಡಿಲಿಕೆ ಇಲ್ಲ. ಉಳಿದ ತಾಲೂಕು ಕೇಂದ್ರಗಳಲ್ಲಿ ಲಾಕ್‌ಡೌನ್ ಸಡಿಲಿಕೆ ಮಾಡಲಾಗಿದೆ. ವಿಜಯಪುರ ಜಿಲ್ಲೆ ಆರೇಂಜ್ ಜೋನ್ನಲ್ಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಜನ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿ ಕೊಳ್ಳುವುದು ಕಡ್ಡಾಯ. ಇದನ್ನು ಮೀರಿದರೆ ರೂ. 200, ಉಳಿದೆಡೆ ರೂ. 100 ಸ್ಥಳದಲ್ಲಿಯೇ ದಂಡ ವಿಧಿಸಲಾಗುವುದು ಎಂದರು.
ನಗರದಲ್ಲಿ ಕಟಿಂಗ್ ಶಾಪ್, ಸಲೂನ್, ಸ್ಪಾ, ಬ್ಯೂಟಿ ಪಾರ್ಲರ್ಗಳಿಗೆ ಅನುಮತಿ ಇಲ್ಲ. ಹೋಟೆಲ್ಗಳಲ್ಲಿ ಪಾರ್ಸೆಲ್ ಸರ್ವೀಸ್ ಇದೆ. ಮಾಲ್, ವಾಣಿಜ್ಯ ಸಂಕೀರ್ಣಗಳು ತೆರೆಯುವಂತಿಲ್ಲ. ವೈಯಕ್ತಿಕ ಅಂಗಡಿ-ಮುಂಗಟ್ಟುಗಳು, ಚಿನ್ನಾಭರಣ, ಬಟ್ಟೆ ಅಂಗಡಿ ಸೇರಿ ಎಲ್ಲಾ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಇಲ್ಲಿ ಸಾಮಾಜಿಕ ಅಂತರ ಕಡ್ಡಾಯ ಎಂದರು. ಕಾರ್ಮಿಕರನ್ನು ಕರೆ ತರಲು ವಿಜಯಪುರದಿಂದ 60 ಬಸ್‌ಗಳನ್ನು ಬೆಂಗಳೂರಿಗೆ ಕಳುಹಿಸಿ ಕೊಡಲಾಗುತ್ತಿದೆ. ನಿನ್ನೆ 10, ಇಂದು 50 ಬಸ್ ತೆರಳಿವೆ. ಇದರಿಂದ ಬೆಂಗಳೂರಿನಲ್ಲಿ ಸಿಲುಕಿರುವ ಕಾರ್ಮಿಕರನ್ನು ಕರೆ ತರಲು ಅನುಕೂಲವಾಗಲಿದೆ ಎಂದರು.
ಮದ್ಯ ಮಾರಾಟಕ್ಕೆ ರೂಲ್ಸ್ ಅನ್ವಯ: ಜಿಲ್ಲೆಯಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಕೆಲ ನಿರ್ಬಂಧಿತ ಪ್ರದೇಶ ಹೊರತುಪಡಿಸಿ ಬೇರೆಡೆ ವೈನ್‌ಶಾಪ್, ಎಂಎಸ್‌ಐಎಲ್ ಗಳಲ್ಲಿ ಮದ್ಯ ದೊರೆಯಲಿದೆ. ಪೊಲೀಸ್ ಭದ್ರತೆಯಲ್ಲಿ ಮದ್ಯವನ್ನು ಮಾರಾಟ ಮಾಡಲಾಗುವದು ಎಂದು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.