ಮುದ್ದೇಬಿಹಾಳ (ವಿಜಯಪುರ): ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರನ್ನು ವರ್ಷದಿಂದೀಚಿಗೆ ಕಂಡಿಲ್ಲ. ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಜನರ ಕಷ್ಟನಷ್ಟಗಳಿಗೆ ಅವರು ಸ್ಪಂದಿಸದೇ ಕಾಣೆಯಾಗಿದ್ದು ಅವರನ್ನು ಹುಡುಕಿಕೊಟ್ಟವರಿಗೆ ಬಹುಮಾನ ನೀಡಲಾಗುವುದು ಎಂದು ಎನ್.ಎಸ್.ಯು.ಐ ಸಂಘಟನೆಯ ಜಿಲ್ಲಾಧ್ಯಕ್ಷ ಸದ್ದಾಂ ಕುಂಟೋಜಿ ಹೇಳಿದ್ದಾರೆ.
ಎನ್.ಎಸ್.ಯು.ಐ ಪತ್ರ:
ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಸದ್ದಾಂ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು, ಇವತ್ತಿನ ಕೊರೊನಾ ಮಹಾಮಾರಿ ಪರಿಸ್ಥಿತಿಯಿಂದ ನಮ್ಮ ಜಿಲ್ಲೆಯ ಜನರು ಸಾವು ನೋವುಗಳನ್ನು ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಯಾವುದೇ ತರಹದ ಆಕ್ಸಿಜನ್, ವೆಂಟಿಲೇಟರ್ ಔಷಧದ ವ್ಯವಸ್ಥೆಯನ್ನು ಅಗತ್ಯಕ್ಕೆ ತಕ್ಕಂತೆ ಮಾಡಿಸುವಲ್ಲಿ ವಿಫಲರಾಗಿದ್ದಾರೆ. ಈ ನಡುವೆ ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 90ರ ಗಡಿದಾಟಿದೆ. ಈ ಸೋಂಕು ನಿವಾರಣೆಗೆ ಬಳಸುವ ಲಿಪೋಸೋಮಲ್ ಅಂಪೋಟೆರಿಸಿನ್ -ಬಿ ಚುಚ್ಚುಮದ್ದನ್ನು ಸಹ ವ್ಯವಸ್ಥೆ ಮಾಡಿಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರದಲ್ಲಿ ಜನರ ಕಷ್ಟ ಸುಖವನ್ನು ವಿಚಾರಿಸಿಲ್ಲ, ಲಾಕ್ಡೌನ್ ಸಂಕಷ್ಟದಿಂದ ಜನರು ಹಸಿವಿನಿಂದ ಕಂಗೆಟ್ಟಿದ್ದಾರೆ. ಕ್ಷೇತ್ರದ ಜನತೆಯ ಸೇವೆ ಮಾಡುವುದು ಅವರ ಕರ್ತವ್ಯ. ಎಲ್ಲಿಯೂ ಒಂದು ಪೊಟ್ಟಣ ಆಹಾರ ನೀಡಿದ್ದನ್ನು ಯಾರು ಕಂಡಿಲ್ಲ. ಒಬ್ಬರಿಗೆ ಒಂದು ರೇಷನ್ ಕಿಟ್ ನೀಡಿದ ಉದಾಹರಣೆಯೂ ಇಲ್ಲ. ಇವೆಲ್ಲವನ್ನೂ ಮೀರಿ ಕ್ಷೇತ್ರದ ಜನತೆಗೆ ಕೈಗೆ ಸಿಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೆಲ್ಲಾ ನೋಡಿದರೆ ಅವರು ನಾಪತ್ತೆಯಾಗಿದ್ದಾರೆ ಎಂಬ ಅನುಮಾನ ನಮ್ಮನ್ನು ಕಾಡುತ್ತಿದ್ದು, ಅವರನ್ನು ಹುಡುಕಿಕೊಟ್ಟು 15 ಲಕ್ಷ ರೂ. ಬಹುಮಾನ ಪಡೆದುಕೊಳ್ಳಿ. ಪ್ರಧಾನಿ ಮೋದಿ ಅವರು ನಮ್ಮ ಖಾತೆಗೆ ಹದಿನೈದು ಲಕ್ಷ ಹಾಕಿದ ಕೂಡಲೇ ಬಹುಮಾನ ನೀಡಲಾಗುವುದು ಎಂದು ವ್ಯಂಗ್ಯವಾಡಿದ್ದಾರೆ.