ವಿಜಯಪುರ: ನನ್ನ ಹಾಗೂ ನನ್ನ ಕುಟುಂಬದ ಮತ್ತು ಆಪ್ತ ಸಹಾಯಕರ ಫೋನ್ ಕಾಲ್ ಡಿಟೇಲ್ಸ್ ಸಂಗ್ರಹ ಮಾಡಲಾಗುತ್ತಿದೆ ಎಂಬ ಆರೋಪದ ಕುರಿತು ಪೊಲೀಸ್ ಇಲಾಖೆಗೆ ದೂರು ಸಲ್ಲಿಕೆ ಮಾಡಲಾಗಿದೆ ಎಂದು ಮಾಜಿ ಸಚಿವ ಎಂ.ಬಿ. ಪಾಟೀಲ ಹೇಳಿದರು. ವಿಜಯಪುರ ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಎಂಬಿಪಿ ಫೋನ್ ಟ್ಯಾಪ್ ಆಗಿಲ್ಲ, ಅದು ಫೋನ್ ಸಿಡಿಆರ್ ಆಗಿದೆ. ಸಿಡಿಆರ್ ತೆಗೆಯುವ ಕೆಲಸ ಮಾಡುತ್ತಿದ್ದಾರೆ. ಬಹಳಷ್ಟು ಜನರಿಗೆ ಸಿಡಿಆರ್ ತೆಗೆಯುವ ಚಾಳಿ ಇದೆ. ಆದರೆ ಯಾರ ಹೆಸರು ಹೇಳೋದಿಲ್ಲ, ಖಾಸಗಿ ಸಿಡಿಆರ್ ತೆಗೆದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಹಾಗೇನಾದರೂ ಆದರೆ ಸರ್ಕಾರ ಜವಾಬ್ದಾರಿ ಎಂದು ಪತ್ರ ಬರೆದಿದ್ದೇನೆ. ಫೋನ್ ಸಿಡಿಆರ್ ನನ್ನ ವಿರೋಧಿಗಳು ಮಾಡುತ್ತಿದ್ದಾರೆ. ಇದರಲ್ಲಿ ಅನುಮಾನ ಇಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ: ಮಾಜಿ ಸಿಎಂ ಸಿದ್ದರಾಮಯ್ಯ ಮತಕ್ಷೇತ್ರ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಏನು ಚರ್ಚೆ ಆಗಿದೆ ನನಗೆ ಗೊತ್ತಿಲ್ಲಾ. ವರುಣಾದಿಂದ ಸ್ಪರ್ಧೆ ಮಾಡಿದರೆ ವ್ಯಾಪಕ ಪ್ರಚಾರ ಮಾಡಲು ಆಗಬಹುದೆಂದು ರಾಹುಲ್ ಗಾಂಧಿ ಹೇಳಿರಬಹುದು. ಕೋಲಾರದಿಂದ ಸ್ಪರ್ಧೆ ಮಾಡಿದರೆ ಅದು ಹೊಸ ಕ್ಷೇತ್ರವಾಗಿದೆ. ಜಾಸ್ತಿ ಸಮಯ ನೀಡಬೇಕಾಗುತ್ತದೆ ಎಂದಿರಬಹುದು ಎಂದರು.
ಸಿದ್ದರಾಮಯ್ಯ 50 ಸಾವಿರ ಮತ ಅಂತರದಲ್ಲಿ ಗೆಲ್ತಾರೆ: ಸಿದ್ದರಾಮಯ್ಯ ಬಾದಾಮಿ, ಕೋಲಾರ, ವರುಣಾ ಎಲ್ಲೇ ನಿಂತರು, 40 - 50 ಸಾವಿರ ಮತಗಳ ಅಂತರಿ ಗೆಲುತ್ತಾರೆ. ಸಿದ್ದರಾಮಯ್ಯ ಬರುವುದರಿಂದ ಪ್ರತಿ ಮತಕ್ಷೇತ್ರದಲ್ಲಿ ಅಭ್ಯರ್ಥಿಗಳು ಗೆಲ್ಲುತ್ತಾರೆ.
ನಮ್ಮ ಪಕ್ಷದ ನೂರಾರು ಶಾಸಕರು ಆಯ್ಕೆಯಾಗುತ್ತಾರೆ. ಅವರಲ್ಲಿ ಅಂತಹ ಶಕ್ತಿ ಇದೆ. ನನ್ನದೇ ಮತಕಕ್ಷೇತ್ರಕ್ಕೆ ಸಿದ್ದರಾಮಯ್ಯ ಪ್ರಚಾರ ಮಾಡಿದರೆ 10 ಸಾವಿರ ಮತಗಳು ಹೆಚ್ಚು ಬರುತ್ತವೆ. ಅವರನ್ನು ಪ್ರಚಾರಕ್ಕೆ ಹೆಚ್ಚು ಬಳಸಿಕೊಳ್ಳಬೇಕೆಂದು ರಾಹುಲ್ ಗಾಂಧಿ ಹೇಳಿರಬಹುದು ಪತ್ರಕರ್ತರಿಗೆ ಸಮುಜಾಯಿಷಿ ಉತ್ತರ ನೀಡಿದರು.
ಯುಗಾದಿ ಹಬ್ಬದ ದಿನ ಕೈ ಪಟ್ಟಿ ರಿಲೀಸ್ :ಯುಗಾದಿ ದಿನ ಮೊದಲ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಆಗುತ್ತದೆ. ಯುಗಾದಿಗೆ ಸಿಹಿ ಸುದ್ದಿ ನೀಡುತ್ತೇವೆಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದ ಅವರು, ಬೆಳಗಾವಿಗೆ ರಾಹುಲ್ ಗಾಂಧಿ ಭೇಟಿ ಮಾಡಲಿದ್ದಾರೆ. ರಾಹುಲ್ ಗಾಂಧಿ ಮಾ. 20(ಸೋಮವಾರ)ರಂದು 11 ಗಂಟೆಗೆ ಬೆಳಗಾವಿಗೆ ಬರುತ್ತಿದ್ದಾರೆ. ಬೃಹತ್ ಯುವಕರ ಯುವ ಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಲಿದ್ದಾರೆ ಎಂದು ತಿಳಿಸಿದರು.
ಆರ್ಥಿಕ ವ್ಯವಸ್ಥೆ ಸಮರ್ಪಕ ನಿಭಾಯಿಸದ ಪ್ರಧಾನಿ-ಎಂಬಿಪಿ: ದೇಶದಲ್ಲಿ ಉದ್ಯೋಗ ನಷ್ಟವಾಗಿದೆ. ಪ್ರಧಾನಿ 2014 ರಲ್ಲಿ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡೋದಾಗ ಹೇಳಿದ್ದರು.ಆದರೆ ಮೋದಿ ಆಧಿಕಾರಕ್ಕೆ ಬಂದು 8 ವರ್ಷ ಆಯ್ತು ಎಲ್ಲಿವೆ 16 ಕೋಟಿ ಉದ್ಯೋಗ ಎಂದು ಪ್ರಶ್ನಿಸಿದ ಅವರು,ನೋಟ್ ಬ್ಯಾನ್ ಮಾಡಿ ತಪ್ಪು ನಿರ್ಣಯ ಮಾಡಿದ್ದಾರೆ.
ಮನ ಮೋಹನ ಸಿಂಗ್ ಹಾಗೂ ನರಸಿಂಹರಾವ್ ಅವರು ಬಲಿಷ್ಠ ಆರ್ಥಿಕ ವ್ಯವಸ್ಥೆ ಹುಟ್ಟು ಹಾಕಿದ್ದರು. ಅದನ್ನು ಪ್ರಧಾನಿ ಮೋದಿ ಸರಿಯಾಗಿ ನಿಭಾಯಿಸಿಲ್ಲ .ಕೋಟ್ಯಂತರ ಉದ್ಯೋಗಗಳನ್ನು ಕಳೆದುಕೊಂಡು ಯುವಕರು ನಿರ್ಗತಿಕರಾಗಿದ್ದಾರೆ ಎಂದು ಆರೋಪಿಸಿದರು.
ಯುವಕರಿಗೆ ಪಕೋಡಾ ಮಾರಾಟ ಮಾಡಲು ಹೋಗಿ ಎಂದಿದ್ದಾರೆ ಎನ್ನುವ ವಿಚಾರ ಸಂವಾದದಲ್ಲಿ ಚರ್ಚೆ ನಡೆಸಲಿದ್ದಾರೆ. ಮೋದಿ ಪಕೋಡಾ ಮಾಡಲು ಎಣ್ಣೆಯೂ ಇತರ ಸಾಮಗ್ರಿ ದುಬಾರಿಯಾಗಿದೆ ಎಂದು ಕಿಡಿಕಾರಿದ ಎಂಬಿಪಿ, ರಾಜ್ಯದಲ್ಲಿ 2 ಲಕ್ಷ ಹಾಗೂ ದೇಶದಲ್ಲಿ ಕೋಟ್ಯಾಂತರ ಉದ್ಯೋಗಗಳು ಖಾಲಿಯಾಗಿವೆ. ಪಿಎಚ್ಸಿಎಲ್, ಹೆಚ್ಎಎಲ್, ಬಿಇಎಲ್ ಎಚ್ಎಂಟಿ ಉದ್ದಿಮೆಗಳು ಮಾರಾಟ ವಾಗುತ್ತಿವೆ. ಇವೆಲ್ಲಾ ವಿಚಾರಗಳನ್ನು ಇಟ್ಟುಕೊಂಡು ರಾಹುಲ್ ಗಾಂಧಿ ಮಾತನಾಡಲಿದ್ದಾರೆ. ಜೊತೆಗೆ ನಾಲ್ಕನೇ ಗ್ಯಾರಂಟಿಯನ್ನು ಘೋಷಣೆ ಮಾಡುತ್ತಾರೆಂದು ಅವರು ಹೇಳಿದರು.
ಎಸ್ ಆರ್ ಪಾಟೀಲಗೆ ಕಾಂಗ್ರೆಸ್ ಟಿಕೆಟ್: ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಎಸ್ ಆರ್ ಪಾಟೀಲಗೆ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರವಾಗಿ ಮಾತನಾಡಿದ ಎಂ ಬಿ ಪಾಟೀಲ ಅವರು, ನನ್ನ ಜೊತೆ ಈ ಬಗ್ಗೆ ಚರ್ಚೆ ಆಗಿಲ್ಲ. ಎಸ್ ಆರ್ ಪಾಟೀಲ್ ದೇವರಹಿಪ್ಪರಿಗೆ ಬರೋದಕ್ಕೆ ಸ್ಥಳೀಯ ಮುಖಂಡರ ವಿರೋಧ ವಿಚಾರ ಹಾಗೂ ಆ ಮತಕ್ಷೇತ್ರದ ಆಕಾಂಕ್ಷಿಗಳ ಮನವಿ ಏನಿದೆ, ಅದರ ಬಗ್ಗೆ ಪಕ್ಷದ ವರಿಷ್ಠರು ಕ್ರಮ ಕೈಗೊಳ್ಳುತ್ತಾರೆ. ಆ ವಿಚಾರದಲ್ಲಿ ಒಂದಿಬ್ಬರು ಆಕಾಂಕ್ಷಿಗಳು ಬಂದು ಭೇಟಿಯಾಗಿದ್ದರು. ಅವರ ಭಾವನೆಗಳನ್ನು ಪಕ್ಷದ ಹಿರಿಯರ ಗಮನಕ್ಕೆ ತರುತ್ತೇನೆ ಎಂದರು.
ಇದನ್ನೂಓದಿ:ವಿಜಯಪುರ: ಮಾ.21ರಿಂದ ಕತ್ನಳ್ಳಿಯ ಗುರು ಚಕ್ರವರ್ತಿ ಸದಾಶಿವ ಜಾತ್ರೆ