ವಿಜಯಪುರ: ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕೆ ಇಲ್ಲ. ಇದೊಂದು ಸುಳ್ಳು ಸುದ್ದಿಯಾಗಿದ್ದು, ಮಾಧ್ಯಮ ಸೃಷ್ಟಿಯಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು.
ವಿಜಯಪುರ ಹೊರವಲಯದ ಬುರಣಾಪುರದಲ್ಲಿ ಆರಂಭವಾಗಲಿರುವ ವಿಮಾನ ನಿಲ್ದಾಣ ಕಾಮಗಾರಿ ಸ್ಥಳ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟ ಕುರಿತು ಮುಖ್ಯಮಂತ್ರಿಗಳ ಮಟ್ಟದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಇದೊಂದು ಗಾಳಿ ಸುದ್ದಿಯಾಗಿದೆ ಹೊರತು, ಈ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ ಎಂದರು.
ಹಿರಿಯ ಸಚಿವರನ್ನು ಕೈ ಬಿಟ್ಟು ಹೊಸಬರಿಗೆ ಅವಕಾಶ ನೀಡಲಾಗುತ್ತಿದೆ ಎನ್ನುವ ಸುದ್ದಿಯನ್ನು ಅಲ್ಲಗಳೆದ ಅವರು ತಮಗಿಷ್ಟ ಬಂದ ಹಾಗೆ ಸುದ್ದಿ ಹರಡಿಸುತ್ತಿದ್ದಾರೆ ಹೊರತು ಇದರಲ್ಲಿ ಸತ್ಯಾಂಶವಿಲ್ಲ. ಸರ್ಕಾರದ ಮಟ್ಟದಲ್ಲಿ ಇಂಥ ಚರ್ಚೆ ನಡೆದಿಲ್ಲ ಎನ್ನುವಾಗ ಸಂಪುಟ ವಿಸ್ತರಣೆ ಎಲ್ಲಿಂದ ಬಂತು ಎಂದರು.
ಭಾನುವಾರದ ಲಾಕ್ಡೌನ್ ಜಿಲ್ಲೆಯಲ್ಲಿ ಇದ್ದರೂ ವಿಮಾನ ನಿಲ್ದಾಣ ಸ್ಥಾಪನೆ ಕಾಮಗಾರಿ ಪರಿಶೀಲನೆ ಮಾಡಲಾಗುತ್ತಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಎಲ್ಲಿಯೂ ಜನರನ್ನು ಸೇರಿಸಿಲ್ಲ, ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಆರಂಭವಾಗಬೇಕು ಎನ್ನುವ ಉದ್ದೇಶದಿಂದ ಸ್ಥಳ ಪರಿಶೀಲನೆ ನಡೆಸಿರುವುದಾಗಿ ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡರು.
ಸರ್ಕಾರಕ್ಕೆ ಒಂದು ವರ್ಷ
ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ್ದು, ಸರ್ಕಾರ ಸಂಕಷ್ಟದ ಮಧ್ಯೆಯೂ ಒಂದು ವರ್ಷ ಪೂರೈಸಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದರು. ಬಿ.ಎಸ್. ಯಡಿಯೂರಪ್ಪ ಅವರು ಯಶಸ್ವಿಯಾಗಿ ರಾಜ್ಯವನ್ನು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸಿದ್ದಾರೆ ಎಂದರು.
2019-20 ನಮಗೆ ಭಾರೀ ಸಂಕಷ್ಟದ ವರ್ಷವಾಗಿತ್ತು. ಈ ಬಾರಿಯಾದರೂ ಅಭಿವೃದ್ಧಿ ಮಾಡಬೇಕು ಎನ್ನುವಷ್ಟರಲ್ಲಿ ಕೊರೊನಾ ಸಮಸ್ಯೆಯಾಗಿದೆ. ಕೊರೊನಾದಿಂದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದರು. ಮುಂದಿನ ದಿನಗಳಲ್ಲಿ ಕೊರೊನಾ ಹಾವಳಿ ಕಡಿಮೆಯಾದ ಮೇಲೆ ಆದಷ್ಟು ವೇಗವಾಗಿ ರಾಜ್ಯವನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.