ವಿಜಯಪುರ: ಯುಪಿಎಸ್ಸಿ ಪರೀಕ್ಷೆ(UPSC Exam Result)ಯಲ್ಲಿ ನಿಡಗುಂದಿ ತಾಲೂಕಿನ ಆಲಮಟ್ಟಿಯ ನೇತ್ರಾ ಮೇಟಿ 326ನೇ ರ್‍ಯಾಂಕ್ ಪಡೆಯುವ ಮೂಲಕ ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಕಳೆದ ಐದು ವರ್ಷಗಳಿಂದ ಸತತ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದ ನೇತ್ರಾ ಮೇಟಿ, ಸದ್ಯಕ್ಕೆ ವಿಜಯಪುರದ ಜಲನಗರ ಪೊಲೀಸ್ ಠಾಣೆ ಹಿಂಬದಿಯ ಮನೆಯಲ್ಲಿ ತಂದೆ-ತಾಯಿ, ತಮ್ಮನ ಜೊತೆ ವಾಸವಿದ್ದಾರೆ. ಇವರ ಇಬ್ಬರು ಸಹೋದರಿಯರು ಸಹ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಓರ್ವ ಸಹೋದರಿ ಖಾಸಗಿ ಕಂಪನಿಯಲ್ಲಿ ಹೆಚ್ ಆರ್ ಆಗಿದ್ದರೆ, ಕೊನೆಯವಳು ಎಂಬಿಬಿಎಸ್ ಎರಡನೇ ಸೆಮಿಸ್ಟರ್ನಲ್ಲಿ ಓದುತ್ತಿದ್ದಾಳೆ.
ತಮ್ಮ ಸಾಧನೆ ಕುರಿತು 'ಈಟಿವಿ ಭಾರತ' ಜೊತೆ ಸಂತಸ ಹಂಚಿಕೊಂಡ ನೇತ್ರಾ, ಐಎಎಸ್ ಇಲ್ಲವೇ, ಐಎಫ್ಎಸ್ ಹುದ್ದೆ ಅಲಂಕರಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.
ಮಗಳ ಸಾಧನೆ ಕುರಿತು ಮಾತನಾಡಿದ ಪೋಷಕರು, ನಮಗೆ ಹೆಣ್ಣು ಮಕ್ಕಳು ಎಂದ್ರೆ ಪ್ರಾಣ. ಹೆಣ್ಣು ಅಬಲೆ ಅಲ್ಲ ಸಬಲೆ. ಅವರಿಗೂ ಪುರುಷರಷ್ಟು ಸಮಾನ ಅವಕಾಶ ಕೊಟ್ಟರೆ ಗಗನಕ್ಕೆ ಹಾರುವ ಇಚ್ಛೆ ಇಟ್ಟುಕೊಂಡಿದ್ದಾರೆ ಎಂದರು.