ವಿಜಯಪುರ: ನನ್ನ ಕೊನೆಯ ಚುನಾವಣೆ ಮತ ಕೊಡಿ ಎಂದು ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ನಾಯಕರು ಮತ ಕೇಳುತ್ತಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಇಲ್ಲಿನ ಸೈನಿಕ ಶಾಲೆಯಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಯುವಕರು, ಮಹಿಳೆಯರು, ದಲಿತರು, ಆದಿವಾಸಿಗಳು ಈ ಬಾರಿ ಉತ್ಸಾಹಭರಿತ ಬಿಜೆಪಿಗೆ ಮತ ನೀಡಲು ನಿರ್ಧರಿಸಿದ್ದಾರೆ ಎಂದರು.
ಬಸವಣ್ಣನವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾರ್ಥಕತೆ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು, ಅಂದು ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ 100 ರೂ. ಅನುದಾನ ಫಲಾನುಭವಿಗಳಿಗೆ ತಲುಪುವ ಹೊತ್ತಿಗೆ 15 ಪೈಸೆಯಾಗಿರುತ್ತದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿಯೊಬ್ಬರು ಗಂಭೀರವಾಗಿ ಹೇಳಿದ್ದರು. ಆದರೆ ಈಗ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಸಂಪೂರ್ಣ ಹಣ ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗೆ ತಲುಪುತ್ತಿದೆ ಎಂದು ಹೇಳಿದರು.
ಗರೀಬಿ ಹಠಾವೋ ಹೆಸರಿನಲ್ಲಿ ರೂಪಿಸಿದ ಅನೇಕ ಯೋಜನೆಗಳಿಂದ ಏನೂ ಪ್ರಯೋಜನವಾಗಿಲ್ಲ, ಭ್ರಷ್ಟಾಚಾರ ಮಾತ್ರ ಜನರಿಗೆ ಕೊಡುಗೆಯಾಗಿ ಸಿಕ್ಕಿತ್ತು. ಕಾಂಗ್ರೆಸ್ ಪ್ರಧಾನಮಂತ್ರಿ ಹೇಳಿದಂತೆ ಕೇಂದ್ರ ಸರ್ಕಾರದಿಂದ 100 ರೂ. ಬರುತ್ತದೆ ಆದರೆ ಇಲ್ಲಿಗೆ ಬರುವುದು 15 ಪೈಸೆ ಅಷ್ಟೇ. ಶೇ.85 ಅನುದಾನವನ್ನು ಭ್ರಷ್ಟಾಚಾರ ಮಾಡಲಾಗಿತ್ತು. ಪ್ರಧಾನಮಂತ್ರಿಯೊಬ್ಬರು ಇದನ್ನು ಸಾರಿದ್ದರು, ಪಂಚಾಯಿತಿಯಿಂದ ಪಾರ್ಲಿಮೆಂಟ್ ವರೆಗೆ ಕಾಂಗ್ರೆಸ್ ಸರ್ಕಾರ ಲೂಟಿಯನ್ನು ತಡೆಗಟ್ಟಲು ಏನೂ ಮಾಡಲಿಲ್ಲ, ಬಡವರ ಕಣ್ಣೀರು ಒರೆಸಲಿಲ್ಲ, ಇಂದಿನ ಪರಿಸ್ಥಿತಿಗೆ ಹೋಲಿಕೆ ಮಾಡಿ ನೋಡಿದಾಗ ಬಡವರ ದೊಡ್ಡ ಪ್ರಮಾಣದ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ ಎಂದು ಮೋದಿ ಆರೋಪಿಸಿದರು.
ಆದರೆ ಇಂದು ಬಿಜೆಪಿ ಸರ್ಕಾರದ ಸಾರಥ್ಯದಲ್ಲಿ 29 ಲಕ್ಷ ಕೋಟಿ ರೂ. ಹಣವನ್ನು ಬಿಪಿಟಿ ಮೂಲಕ ಯೋಜನಾ ಫಲಾನುಭವಿಗಳಿಗೆ ಅವರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಬರುವ 100 ರೂ. ಅನುದಾನ ಪೂರ್ಣಪ್ರಮಾಣದಲ್ಲಿ ಫಲಾನುಭವಿಗಳಿಗೆ ತಲುಪುತ್ತಿದೆ. ಕಾಂಗ್ರೆಸ್ ಈ ಕಾರ್ಯ ಮಾಡಿದ್ದರೆ ಬಡವರ ಹಕ್ಕಿನ ಶೇ.85 ರಷ್ಟು ಹಣ ಗಾಯಬ್ ಆಗುತ್ತಿರಲಿಲ್ಲ, ಅದೇ ಕಾಂಗ್ರೆಸ್ ಸರ್ಕಾರ ಇದ್ದರೆ 24 ಲಕ್ಷ ಕೋಟಿ ರೂ. ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿತ್ತು. ಡಬಲ್ ಇಂಜಿನ್ ಸರ್ಕಾರ ಇದೇ ಹಣ ಬಳಸಿ ಬಡವರಿಗೆ ಪಡಿತರ ನೀಡುತ್ತಿದೆ. ಕಾಂಗ್ರೆಸ್ ಸರ್ಕಾರ ಅನ್ನದಾತನ ಹೆಸರಿನಲ್ಲಿ ಘೋಷಣೆ ಘೋಷಿಸುತ್ತಿತ್ತು. ಆದರೆ ಬಡ ರೈತರಿಗೆ ಯಾವ ಪ್ರಯೋಜನ ದೊರಕಿಲ್ಲ, ಕಿಸಾನ್ ಸಮ್ಮಾನ್ ಯೋಜನೆ 1.5 ಲಕ್ಷ ಕೋಟಿ ರೂ. ಕರ್ನಾಟಕಕ್ಕೆ 600 ಕೋಟಿ ರೂ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಈ ಹಣ ಯಾವತ್ತೂ ನಿಮಗೆ ಸೇರುತ್ತಿರಲಿಲ್ಲ ಎಂದು ಟೀಕಿಸಿದರು.
ಅನ್ನದಾತನ ಸಮಸ್ಯೆಯನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲಿಲ್ಲ. ಆದರೆ ಬಿಜೆಪಿಗೆ ಅನ್ನದಾತನ ಸಮಸ್ಯೆಗಳ ಮೇಲೆ ಅರಿವಿದೆ, ಪಂಚ ನದಿಗಳಲ್ಲಿದ್ದರೂ ನೀರಾವರಿಗೆ ದೊಡ್ಡ ಪ್ರಯತ್ನಗಳು ನಡೆಯಬೇಕಿದ್ದವೋ ಅಷ್ಟು ಪ್ರಯತ್ನ ನಡೆದಿಲ್ಲ. ಈಗ ಅನೇಕ ನೀರಾವರಿ ಯೋಜನೆಗಳು, ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಯುಕೆಪಿ ಮೂರನೇಯ ಹಂತದ ಕೃಷ್ಣಾ ಕೊಳ್ಳದ ನೀರಾವರಿ, ನಾರಾಯಣಪುರ ಜಲಾಶಯಕ್ಕೆ ಆಧುನಿಕ ಸ್ಪರ್ಶ, ಮುಳವಾಡ ಲಿಫ್ಟ್ ಇರಿಗೇಷನ್, ಹೊರ್ತಿ-ರೇವಣಸಿದ್ದೇಶ್ವರ ಯೋಜನೆಯನ್ನು ಡಬಲ್ ಇಂಜಿನ್ ಸರ್ಕಾರ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್ ಸರ್ಕಾರದ ಅಲಕ್ಷ್ಯದಿಂದ ತೊಂದರೆ ಎದುರಿಸಿದ್ದು ಮಹಿಳೆಯರು. ಮಹಿಳೆಯರ ಸುರಕ್ಷತೆ, ಉದ್ಯೋಗದ ಬಗ್ಗೆ ಚಿಂತೆಯೇ ಮಾಡಿಲ್ಲ. ಡಬಲ್ ಇಂಜಿನ್ ಸರ್ಕಾರ ಆಯುಷ್ಮಾನ್ ಕಾರ್ಡ್ ಮೂಲಕ ಆರೋಗ್ಯ ಯೋಜನೆ ಜಾರಿ ಮಾಡಿ ಮಹಿಳೆಯರಿಗೆ ಆರೋಗ್ಯದ ಅಭಯ ನೀಡಿದೆ ಎಂದರು.
ಕಾಯಕ, ದಾಸೋಹದ ಮಾರ್ಗವನ್ನು ಅಣ್ಣ ಬಸವಣ್ಣ ತೋರಿದ್ದಾರೆ. ಬಿಜೆಪಿಯ ವಿಚಾರಧಾರೆಯಾಗಿರುವ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುವ ಉಕ್ತಿಗೆ ಬಸವಣ್ಣನವರ ಆಶಯವೇ ಆಧಾರ, ಅಣ್ಣ ಬಸವಣ್ಣನವರ ಕಾಯಕ-ದಾಸೋಹದ ಪ್ರಭಾವ ಬಿಜೆಪಿ ಎಲ್ಲ ಯೋಜನೆಗಳಲ್ಲಿ ಕಾಣಿಸಿಗುತ್ತಿದೆ. ಬಿಜೆಪಿ ಸರ್ಕಾರ ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗೆ ಪ್ರಾತಿನಿಧ್ಯ, ಆರ್ಥಿಕ-ಸಾಮಾಜಿಕ ಸುರಕ್ಷೆ ನೀಡಿದೆ, 9 ಲಕ್ಷ ಕುಟುಂಬಗಳಿಗೆ ಅನೇಕ ಪೀಳಿಗೆಯ ನಂತರ ಪಕ್ಕಾ ಮನೆಯಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಇದರಲ್ಲಿ ದಲಿತ, ಶೋಷಿತರು, ಹಿಂದುಳಿದ ವರ್ಗಗಳ ಕುಟುಂಬದವರೇ ಹೆಚ್ಚು ಎಂದು ಮೋದಿ ತಿಳಿಸಿದರು.
ಅಂತಿಮ ಅಭಿವಂದನ ಪತ್ರದ ಕಾಣಿಕೆ: ಸಹಸ್ರಮಾನದ ಸಂತ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ಅಭಿವಂದನ ಪತ್ರದ ಭಾವಚಿತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಮರ್ಪಿಸಲಾಯಿತು. ಸೈನಿಕ ಶಾಲೆಯಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಮೋದಿ ಆಗಮಿಸುತ್ತಿದ್ದಂತೆ ಮೋದಿ ಮೋದಿ ಎಂಬ ಘೋಷಣೆಯನ್ನು ಮೊಳಗಿಸಿದರು.
ಮೋದಿ ಎಂದರೆ ಭ್ರಷ್ಟರಿಗೆ ಸಿಂಹಸ್ವಪ್ನ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮಾತನಾಡಿ, ದೇಶಕ್ಕಾಗಿ ನಾವು ಪ್ರಾಣ ತ್ಯಾಗ ಮಾಡಲು ಸಿದ್ಧ, ನಾವು ಭಾರತದ ಅಪಮಾನವನ್ನು ಯಾವ ಕಾಲಕ್ಕೂ ಸಹಿಸುವುದಿಲ್ಲ, ಪ್ರತಿಪಕ್ಷ ನಾಯಕರೇ ಕೆಟ್ಟ ನಾಲಿಗೆಯಿಂದ ನಮ್ಮ ನಾಯಕರನ್ನು ಟೀಕಿಸಿದರೆ ಅದೇ ಪರಿಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತದೆ. ನೇತಾಜಿ ಸುಭಾಸಚಂದ್ರ ಬೋಸ್ ಅವರ ಅಪರಾವತಾರರಾಗಿರುವ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಭಾರತ ವಿಶ್ವಗುರುವಾಗಿ ಮುನ್ನಡೆಯುತ್ತಿದೆ. ಮೋದಿ ಎಂದರೆ ದೇಶ, ಮೋದಿ ಎಂದರೆ ರಕ್ಷಣೆ, ಮೋದಿ ಎಂದರೆ ಹಿಂದುತ್ವ, ಮೋದಿ ಎಂದರೆ ಭ್ರಷ್ಟರಿಗೆ ಸಿಂಹ ಸ್ವಪ್ನ, ಮೋದಿ ಎಂದರೆ ಪ್ರಾಮಾಣಿಕತೆ, ಮೋದಿ ಎಂದರೆ ಸಂಸ್ಕೃತಿ, ಮೋದಿ ಎಂದರೆ ದೂರದೃಷ್ಟಿ, ಮೋದಿ ಎಂದರೆ ಅಜಾತಶತ್ರು ಎಂದು ಯತ್ನಾಳ್ ಪ್ರಧಾನಿಯನ್ನು ಕೊಂಡಾಡಿದರು.
ಈ ವೇಳೆ ಸಂಸದ ರಮೇಶ ಜಿಗಜಿಣಗಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ, ಶಾಸಕ ಹಾಗೂ ಮುದ್ದೇಬಿಹಾಳ ಬಿಜೆಪಿ ಅಭ್ಯರ್ಥಿ ಎ.ಎಸ್. ಪಾಟೀಲ ನಡಹಳ್ಳಿ, ಶಾಸಕ ಹಾಗೂ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ, ಬಬಲೇಶ್ವರ ಅಭ್ಯರ್ಥಿ ವಿಜುಗೌಡ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ:ಕಾಂಗ್ರೆಸ್ನವರ ಭ್ರಷ್ಟಾಚಾರದ ಹಣಕ್ಕೆ ನಾನು ತಡೆ ನೀಡಿದ್ದೇನೆ: ಪ್ರಧಾನಿ ಮೋದಿ