ವಿಜಯಪುರ: ಕುರುಬ ಸಮಾಜ ಎಸ್ಟಿ ಮೀಸಲು ಬೇಡಿಕೆ ಹಾಗೂ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕುರಿತು ಮುಖ್ಯಮಂತ್ರಿ ಅವರು ಕಾನೂನಿನ ಚೌಕಟ್ಟಿನಲ್ಲಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ನಗರದ ಜೋರಾಪುರ ಪೇಟೆಯ ಶಂಕರಲಿಂಗೇಶ್ವರ ದೇವರ ದರ್ಶನ ಪಡೆದ ನಂತರ ಮಾತನಾಡಿದ ಅವರು, ಹಿಂದೆಯೂ ಹೀಗೆ ಅನೇಕ ಸಮಾಜಗಳ ಬೇಡಿಕೆಗಳನ್ನು ಆಯಾ ಕಾಲದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಬಗೆಹರಿಸಿದ್ದಾರೆ. ಈಗಲೂ ಅದೇ ರೀತಿ ಮಾಡಲಿದ್ದಾರೆ. ಬಹಳ ನುರಿತ ಹಿರಿಯರಿದ್ದಾರೆ. ಹೀಗಾಗಿ, ಗೊಂದಲ ರಹಿತವಾಗಿ ಸಮಸ್ಯೆ ಬಗೆಹರಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ...ಎಸ್ಟಿ ಮೀಸಲಾತಿ ಹೆಚ್ಚಳ ಮಾಡಲು ಕ್ರಮ: ಸಿಎಂ ಬಿಎಸ್ವೈ ಭರವಸೆ
ಖಾತೆ ಹಂಚಿಕೆ ಗೊಂದಲ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಸರ್ಕಾರದಲ್ಲಿ ಇಂತಿಷ್ಟೇ ಖಾತೆ ಇರಬೇಕೆಂಬ ನಿಯಮವಿದೆ. ಅದಕ್ಕಿಂತ ಹೆಚ್ಚಿನ ಬೇಡಿಕೆಯೂ ಇದೆ. ಹೀಗಾಗಿ, ಒತ್ತಡ ಸಹಜ. ಇದಕ್ಕೆ ರಾಜಕಾರಣ ಎನ್ನುತ್ತಾರೆ ಎಂದರು.
ಪಕ್ಷದ ಶಾಸಕರ ಅಪೇಕ್ಷೆ ತಪ್ಪಲ್ಲ. ರಾಜ್ಯಾಧ್ಯಕ್ಷರು, ಸಿಎಂ ಹಾಗೂ ಕೇಂದ್ರ ನಾಯಕರು ಯಾರಿಗೆ ಯಾವ ಅವಕಾಶ ನೀಡಬೇಕು ಎಂಬುದನ್ನು ತೀರ್ಮಾನಿಸಿದ ನಂತರವೇ ಖಾತೆ ನೀಡಲಾಗುತ್ತದೆ. ಸಿಎಂ ಬದಲಾವಣೆ ಅಸಾಧ್ಯ. ನಿಮ್ಮಲ್ಲಿ ಗೊಂದಲವಿದೆಯೇ ಹೊರತು ಸರ್ಕಾರದಲ್ಲಿಲ್ಲ. ಬಿಎಸ್ವೈ ಈ ಅವಧಿ ಮುಗಿಯುವವರಿಗೂ ಸಿಎಂ ಆಗಿರುತ್ತಾರೆ ಎಂದು ಯುಗಾದಿ ಬಳಿಕ ಸಿಎಂ ಬದಲಾವಣೆ ಕುರಿತು ಶಾಸಕ ಯತ್ನಾಳ್ ನೀಡಿರುವ ಹೇಳಿಕೆಗೆ ಉತ್ತರಿಸಿದರು.
ಜಾತ್ರೆ, ದೇವಸ್ಥಾನಕ್ಕೆ ಅನುಮತಿ: ಕೊರೊನಾ ನಡುವೆಯೂ ಜಾತ್ರೆ ಮತ್ತು ಹಬ್ಬ ಹರಿದಿನಗಳ ಜೊತೆಗೆ ದೇವಸ್ಥಾನ ಪ್ರವೇಶಕ್ಕೆ ಮುಕ್ತ ಅವಕಾಶ ನೀಡಿರುವ ಸರ್ಕಾರದ ನಿರ್ಧಾರ ಸಮರ್ಥಿಸಿಕೊಂಡ ಸಚಿವರು, ಸಾರ್ವಜನಿಕರಿಂದ ಹೆಚ್ಚಿನ ಬೇಡಿಕೆ ಬಂದಿತ್ತು. ಕೊರೊನಾ ಸಹ ನಿಯಂತ್ರಣದಲ್ಲಿರುವ ಕಾರಣ ಜಾತ್ರೆ, ಹಬ್ಬ, ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಮುಕ್ತ ಅವಕಾಶ ನೀಡಲಾಗಿದೆ. ಕಡ್ಡಾಯವಾಗಿ ಕೊರೊನಾ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದರು.