ಮುದ್ದೇಬಿಹಾಳ(ವಿಜಯಪುರ) : ಅಕ್ರಮ ಮದ್ಯ ಮಾರಾಟ ವಿಷಯವಾಗಿ ಅಬಕಾರಿ ಇಲಾಖೆಯ ಇನ್ಸ್ಪೆಕ್ಟರ್ರೊಂದಿಗೆ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಅವರ ಸಹೋದರ ಶಾಂತಗೌಡ ಪಾಟೀಲ್ ನಡಹಳ್ಳಿ ತೀವ್ರ ಜಟಾಪಟಿ ನಡೆಸಿದ ಘಟನೆ ಮಂಗಳವಾರ ನಡೆದಿದೆ. ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಅಬಕಾರಿ ನಿರೀಕ್ಷಕರ ಕಚೇರಿಗೆ ಆಗಮಿಸಿದ ಶಾಂತಗೌಡ ಪಾಟೀಲ್ ನಡಹಳ್ಳಿ ಅವರು, ಮುದ್ದೇಬಿಹಾಳ ಅಬಕಾರಿ ಇಲಾಖೆಯ ನಿರೀಕ್ಷಕಿ ಜ್ಯೋತಿ ಮೇತ್ರಿ ಅವರೊಂದಿಗೆ ವಾಗ್ವಾದ ನಡೆಸಿದರು.
ಈ ವೇಳೆ ಮಾತನಾಡಿದ ಶಾಸಕರ ಸಹೋದರ ಶಾಂತಗೌಡ ಅವರು, ತಾಲೂಕಿನ ಎಲ್ಲ ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಆದರೆ, ಕೆಲವಷ್ಟನ್ನೇ ಟಾರ್ಗೆಟ್ ಮಾಡಿ ಬಂದ್ ಮಾಡಿಸಿ ಕೇಸ್ ಹಾಕಿರುವುದರ ಹಿಂದಿನ ಉದ್ದೇಶವೇನು ಎಂದು ತರಾಟೆಗೆ ತೆಗೆದುಕೊಂಡರು. ಅಲ್ಲದೇ ಎಲ್ಲ ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದರೂ ಮೌನವಾಗಿದ್ದೇಕೆ? ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರುತ್ತಿದ್ದರೂ ಕ್ರಮ ಜರುಗಿಸುತ್ತಿಲ್ಲವೇಕೆ?. ಸಣ್ಣ-ಪುಟ್ಟ ಅಂಗಡಿಕಾರರು, ಡಾಬಾಗಳ ಮೇಲಷ್ಟೇ ನಿಮ್ಮ ಗದಾಪ್ರಹಾರವೇ? ಎಂದು ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ನೂಪುರ್ ಶರ್ಮಾ ಪರ ಪೋಸ್ಟ್ ಹಾಕಿದ್ದ ವ್ಯಕ್ತಿಯ ಶಿರಚ್ಚೇದ; ರಾಜಸ್ಥಾನದಲ್ಲಿ ಪರಿಸ್ಥಿತಿ ಉದ್ವಿಗ್ನ
ಇದೇ ವೇಳೆ ಘಟನೆಯ ವಿಡಿಯೋ ಮಾಡುತ್ತಿದ್ದ ಮಾಧ್ಯಮದವರ ವಿರುದ್ಧವೂ ಮಾತನಾಡಿದ ಅಧಿಕಾರಿ ಮೇತ್ರಿ, ಇಲ್ಲಿ ವಿಡಿಯೋ ಮಾಡುವುದಕ್ಕೆ ಅವಕಾಶವಿಲ್ಲ. ನಾನು ಬೈಟ್ ಕೊಡುವುದಿಲ್ಲ. ವಿಡಿಯೋ ಮಾಡಬೇಡಿ ಎಂದರು. ಶಾಸಕರ ಸಹೋದರರೇ ಅಬಕಾರಿ ಕಚೇರಿಗೆ ಬಂದು ಮಾತನಾಡಿರುವುದು ತಾಲೂಕಿನಲ್ಲಷ್ಟೇ ಅಲ್ಲ, ಜಿಲ್ಲೆಯಲ್ಲೂ ಸಂಚಲನಕ್ಕೆ ಕಾರಣವಾಗಿದೆ.