ಮುದ್ದೇಬಿಹಾಳ: ಪ್ರಥಮ ಬಾರಿಗೆ ತಾಲೂಕು ಆಡಳಿತ ಗ್ರಾಪಂ ಚುನಾವಣೆಯ ಮತ ಎಣಿಕೆ ಕಾರ್ಯಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿಕೊಂಡಿದ್ದು, ಮತ ಎಣಿಕೆ ಸಿಬ್ಬಂದಿಗೆ ವಿಶೇಷ ಟೇಬಲ್ ವ್ಯವಸ್ಥೆ ಮಾಡಿದೆ. ಅಲ್ಲದೇ ಶಾಂತಿಯುತವಾಗಿ ಮತ ಎಣಿಕೆ ಮುಗಿಯಲು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಂಡಿದೆ.
ಪಟ್ಟಣದ ಎಂಜಿವಿಸಿ ಕಾಲೇಜಿನ ಮತ ಎಣಿಕೆ ಕೇಂದ್ರದಲ್ಲಿ ಡಿ.30ರಂದು ನಡೆಯಲಿರುವ ಮತ ಎಣಿಕೆಯ ಪೂರ್ವ ಸಿದ್ಧತೆಯನ್ನು ಮಂಗಳವಾರ ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್ ಎಂ.ಎಸ್.ಅರಕೇರಿ ಅವರು, ಮತ ಎಣಿಕೆ ಕೇಂದ್ರದಲ್ಲಿ ನಿಯಮ ಉಲ್ಲಂಘನೆ, ಶಾಂತಿಭಂಗ ಮಾಡುವವರ ವಿರುದ್ಧ ಚುನಾವಣಾ ಕಾಯ್ದೆ ಅನ್ವಯ ಕಠಿಣ ಕಾನೂನು ಕ್ರಮ ಕೈಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಂಜೆಯವರೆಗೂ ಫಲಿತಾಂಶ ಸಾಧ್ಯತೆ
ಮತ ಎಣಿಕೆಯ ಫಲಿತಾಂಶ ತ್ವರಿತವಾಗಿ ಈ ಬಾರಿ ಘೋಷಣೆಯಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಕಾರಣ ಬ್ಯಾಲೆಟ್ ಪೇಪರ್ ಇರುವುದರಿಂದ ಪ್ರತಿಯೊಂದನ್ನು ತಪಾಸಣೆ ಮಾಡಿ ಏಜೆಂಟರು, ಅಭ್ಯರ್ಥಿಗಳು ಖಚಿತಪಡಿಸಿಕೊಂಡ ನಂತರವೇ ಎಣಿಕೆಗೆ ಪರಿಗಣಿಸಬೇಕಾಗಿರುವುದರಿಂದ ಮತ ಎಣಿಕೆ ಮುಗಿದು ಒಟ್ಟಾರೆ ಫಲಿತಾಂಶ ಹೊರ ಬರಲು ಸಂಜೆ 6 ರಿಂದ 7 ಗಂಟೆ ಸಮಯವಾಗಬಹುದು ಎಂದು ಹೇಳಲಾಗುತ್ತಿದೆ.
ಶಾಂತಿ ಸ್ಥಾಪನೆಗೆ ಬಿಗಿ ಪೊಲೀಸ್ ಭದ್ರತೆ
ಈಗಾಗಲೇ ಡಿ.30ರ ಬೆಳಗಿನ 6ರಿಂದ ಮಧ್ಯರಾತ್ರಿ 12ರವರೆಗೆ ಪಟಾಕಿ ಮಾರಾಟ, ಸಿಡಿಸುವಿಕೆ, ಮದ್ಯ ಮಾರಾಟ ನಿಷೇಧಿಸಿ ಹಾಗೂ ಎಣಿಕೆ ಕೇಂದ್ರದ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದಾರೆ. ಎಣಿಕೆ ಕೇಂದ್ರದಲ್ಲಿ ಯಾರು ಯಾರಿಗೆ ಪ್ರವೇಶವಿದೆ ಎನ್ನುವುದನ್ನೂ ಸ್ಪಷ್ಟಪಡಿಸಲಾಗಿದೆ. ಮೊಬೈಲ್ ಸೇರಿ ನಿಷೇಧಿತ ವಸ್ತುಗಳನ್ನು ತರಲು ಅವಕಾಶ ಇಲ್ಲ. ಕೇಂದ್ರದ ಹೊರಗೆ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ ಎಂದರು.
ಓದಿ-'ಬಾಲಿವುಡ್ ಹಾಡಿಗೆ ಕಮ್ಮಿ ಇಲ್ಲದಂತೆ ಈ ಸಾಂಗ್ ಶೂಟಿಂಗ್ ಮಾಡಲಾಗಿದೆ'
ಎಣಿಕೆಗೆ ಸಿದ್ಧತೆ ಪೂರ್ಣ
ತಾಲೂಕಿನ 20 ಗ್ರಾಪಂ ವ್ಯಾಪ್ತಿಯ 114 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಡೆದಿರುವ ಮತದಾನದ ಮತ ಎಣಿಕೆಗೆ ಎಂಜಿವಿಸಿ ಕಾಲೇಜಿನಲ್ಲಿ ತಾಲೂಕು ಆಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಇದಕ್ಕಾಗಿ 3 ಕೊಠಡಿಗಳಲ್ಲಿ ತಲಾ 15 ರಂತೆ 45 ಟೇಬಲ್ ಸಿದ್ದಪಡಿಸಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬ ಮೇಲ್ವಿಚಾರಕ, ಇಬ್ಬರು ಎಣಿಕೆ ಸಿಬ್ಬಂದಿ ನೇಮಿಸಲಾಗಿದೆ.
ಓದಿ-ಗ್ರಾಮ ಪಂಚಾಯತ್ ಚುನಾವಣೆ: 2 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರ
ನಿಗದಿತ ಅಭ್ಯರ್ಥಿ ಇಲ್ಲವೇ ಏಜೆಂಟ್ಗೆ ಪ್ರವೇಶ
ತುರ್ತುಸೇವೆಗೆ ಗೆಂದು 2 ಹೆಚ್ಚುವರಿ ಟೇಬಲ್, ಅಗತ್ಯ ಸಿಬ್ಬಂದಿ ಮೀಸಲಿರಿಸಿದೆ. ಆಯಾ ಕೊಠಡಿಯೊಳಕ್ಕೆ ಪ್ರವೇಶಿಸಲು ನಿಗದಿಪಡಿಸಿದ ಕ್ಷೇತ್ರಗಳ ಅಭ್ಯರ್ಥಿ ಇಲ್ಲವೇ ಅವರ ಏಜಂಟ್ ಇವರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಕೊಡಲಾಗುತ್ತದೆ. ಕೊಠಡಿಯೊಳಕ್ಕೆ ಟೇಬಲ್ ಸುತ್ತಲೂ ತಂತಿಯ ಜಾಲರಿ ಅಳವಡಿಸಲಾಗಿದ್ದು ಇದನ್ನು ದಾಟಿ ಒಳಗೆ ಬಂದಲ್ಲಿ ಅಂಥವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗುತ್ತದೆ ಎಂದು ಹೇಳಿದರು.
ಎರಡು ಅಥವಾ ಮೂರು ರೌಂಡ್‌ಗಳಲ್ಲಿ ಮತ ಎಣಿಕೆ
ಎಲ್ಲ 20 ಗ್ರಾಪಂಗಳ ಎಣಿಕೆಯನ್ನು ಏಕಕಾಲಕ್ಕೆ ಪ್ರಾರಂಭಿಸಲಾಗುತ್ತದೆ. ಎರಡು ಅಥವಾ ಮೂರು ರೌಂಡ್‌ಗಳಲ್ಲಿ ಎಣಿಕೆ ಮುಕ್ತಾಯಗೊಳ್ಳುತ್ತದೆ. ಮೊದಲಿಗೆ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಿಟ್ಟುಕೊಳ್ಳಲಾಗುತ್ತದೆ. ನಂತರ ಆಯಾ ಕ್ಷೇತ್ರಗಳ ಮತಪತ್ರ ಜೋಡಿಸಿಕೊಂಡು 25ರ ಬಂಡಲ್ ಮಾಡಿಕೊಂಡು ಎಣಿಕೆ ಪ್ರಾರಂಭಿಸಲಾಗುತ್ತದೆ. ಚುನಾವಣಾ ಆಯೋಗ ನಿಗದಿಪಡಿಸಿರುವ ಮಾದರಿಯಲ್ಲೇ ವಿಜೇತರ ಫಲಿತಾಂಶವನ್ನು ಆಯಾ ಗ್ರಾಪಂನ ಚುನಾವಣಾಧಿಕಾರಿಗಳು ಘೋಷಣೆ ಮಾಡುತ್ತಾರೆ ಎಂದರು.