ಮುದ್ದೇಬಿಹಾಳ: ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದುಕೊಂಡ ತಮ್ಮ ಮೊಮ್ಮಗನ ಸಾಧನೆಯ ಬಗ್ಗೆ ಭಾವುಕರಾಗಿಯೇ ಮಾತನಾಡಿದ ಶಂಕ್ರಪ್ಪ ಅವರು, ನನ್ನ ಮೊಮ್ಮಗ 9ನೇ ತರಗತಿಯಲ್ಲಿದ್ದಾಗ ಅವರ ಅಪ್ಪ ತೀರಿಕೊಂಡ. ಅವನಿಗೆ ಈಗ ಆಸರೆ ಎಂದರೆ ನಾನು, ಅವರ ತಾಯಿ ಹಾಗೂ ಚಿಕ್ಕಪ್ಪಂದಿರು. ಆತನಿಗೆ ಓದುವ ಹಂಬಲ ಹೆಚ್ಚು. ಎಲ್ಲಿತನ ಓದತೀನಿ ಅಂತಾನ ಅಲ್ಲಿತನ ಓದಸ್ತೀವಿ. ನಮಗಿರುವ ಹತ್ತು ಎಕರೆ ಜಮೀನು ಮಾರಿಯಾದರೂ ಅವನಿಗೆ ಓದಸ್ತೀವಿ ಎಂದು ಹೇಳುತ್ತಾ ಆನಂದ ಭಾಷ್ಪ ಸುರಿಸಿದರು.
ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಪಾಟೀಲ್ ಮಾತನಾಡಿ, ಓದಿನಲ್ಲಿ ಎಲ್ಲರಿಗಿಂತ ಮುಂದೆ ಇದ್ದ ವಿದ್ಯಾರ್ಥಿ ನಿಂಗೊಂಡ, ಎಲ್ಲರ ಜೊತೆಗೆ ಸಹಜವಾಗಿ ಬೆರೆಯುತ್ತಿರಲಿಲ್ಲ. ತಾನಾಯಿತು ತನ್ನ ಓದಾಯಿತು ಎಂದು ಮುಗ್ಧತೆಯಿಂದ ಇದ್ದ. ಆತನ ಮುಗ್ಧತೆಯೇ ಇಂದು ರಾಜ್ಯಮಟ್ಟದಲ್ಲಿ ಸಾಧನೆ ಮಾಡುವಂತಾಗಿದೆ ಎಂದು ಹೇಳಿದರು.
ಮುಖ್ಯಗುರು ಇಸ್ಮಾಯಿಲ್ ಮನಿಯಾರ್, ಸಂಸ್ಥೆಯ ಮುಖ್ಯಸ್ಥ ಅಮಿತ ಗೌಡ ಪಾಟೀಲ್ ಮಾತನಾಡಿ, ನಮಗೆ ನಿಂಗೊಂಡನ ಫಲಿತಾಂಶದ ಮೇಲೆ ನಿರೀಕ್ಷೆ ಇತ್ತು. ಅಂದಾಜು 622-624 ರ ವರೆಗೆ ಅಂಕ ಪಡೆದುಕೊಳ್ಳುತ್ತಾನೆ ಎಂದು ಭಾವಿಸಿದ್ದೆವು. ನಮ್ಮ ನಿರೀಕ್ಷೆ ಸುಳ್ಳಾಗಿಲಿಲ್ಲ. ಆತನ ಫಲಿತಾಂಶ ಎಲ್ಲರಿಗೂ ಖುಷಿ ನೀಡಿದೆ ಎಂದರು.
ವಿದ್ಯಾರ್ಥಿ ನಿಂಗೊಂಡ ಗಂಜ್ಯಾಳ, ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಪಾಟೀಲ್ ಸರ್ ಅವರ ಮಾರ್ಗದರ್ಶನ ಹಾಗೂ ಶಿಕ್ಷಕರ ಪ್ರೋತ್ಸಾಹ, ಮನೆಯವರ ಪ್ರೀತಿ, ವಿಶ್ವಾಸಗಳಿಂದ ಇಂದು ಇಷ್ಟು ಅಂಕ ಪಡೆದುಕೊಳ್ಳಲು ಸಾಧ್ಯವಾಗಿದೆ. ಫಲಿತಾಂಶ ಖುಷಿ ಕೊಟ್ಟಿದ್ದು ಮುಂದೆ ಡಾಕ್ಟರ್ ಆಗುವ ಕನಸು ಇದೆ ಎಂದು ಹೇಳಿದರು.