ಮುದ್ದೇಬಿಹಾಳ: ಮಿಣಜಗಿ ಗ್ರಾಮದ ಪರಿಶಿಷ್ಟ ಜಾತಿ ಬಡಾವಣೆಯ ಜನರಿಗೆ ಪ್ರತ್ಯೇಕವಾಗಿ ಸ್ಮಶಾನ ಜಾಗ ಒದಗಿಸುವುದು ಹಾಗೂ ಪ್ರತ್ಯೇಕ ನ್ಯಾಯಬೆಲೆ ಅಂಗಡಿಯ ಬೇಡಿಕೆಯನ್ನು ಪರಿಶೀಲನೆ ನಡೆಸಿ ಈಡೇರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ಹೇಳಿದರು.
ಮಿಣಜಗಿ ಗ್ರಾಮದಲ್ಲಿ ಸವರ್ಣೀಯರಿಂದ ಪರಿಶಿಷ್ಟ ಜಾತಿ ಯುವಕನೋರ್ವನ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಶಾಂತಿಪಾಲನಾ ಸಭೆ ನಡೆಸಿ ಮಾತನಾಡಿದ ಅವರು, ಎಲ್ಲಾ ಸಮುದಾಯಗಳಲ್ಲಿ ಮುಖಂಡರು ಇರುತ್ತಾರೆ. ಸಣ್ಣಪುಟ್ಟ ಘಟನೆಗಳು ನಡೆದ ತಕ್ಷಣವೇ ಅವುಗಳನ್ನು ಸರಿಪಡಿಸಿ ಇಬ್ಬರಿಗೂ ತಿಳುವಳಿಕೆ ನೀಡುವಂತಹ ಕಾರ್ಯವಾಗಬೇಕು. ಎಲ್ಲರ ಮನಸ್ಸಿನಲ್ಲಿ ಸಹೋದರ, ಶಾಂತಿ, ಸೌಹಾರ್ದತೆಯ ಭಾವನೆ ಬೆಳೆಯಬೇಕು. ಮಿಣಜಗಿ ಗ್ರಾಮದ ಸಮುದಾಯಗಳ ರಕ್ಷಣೆಯ ಜವಾಬ್ದಾರಿ ಜಿಲ್ಲಾಡಳಿತಕ್ಕಿದೆ ಎಂದರು.
20 ಲಕ್ಷ ರೂ. ವೆಚ್ಚದಲ್ಲಿ ಎಸ್.ಸಿ. ಬಡಾವಣೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದು, ರಸ್ತೆ ಸುಧಾರಣೆಗೂ ಅನುದಾನ ಬಿಡುಗಡೆಯಾಗಿದೆ ಎಂದು ಇದೇ ವೇಳೆ ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಮಾತನಾಡಿ, ಮಿಣಜಗಿ ಶಾಂತಿ ಪ್ರಿಯವಾದ ಗ್ರಾಮ. ಈ ಘಟನೆ ಗ್ರಾಮಕ್ಕೆ ಕಪ್ಪುಚುಕ್ಕೆ ತರುವಂತಹದ್ದಾಗಿದೆ. ಎರಡು ಸಮುದಾಯದ ಜನರು ಗ್ರಾಮದಲ್ಲಿ ಸಹೋದರತೆಯಿಂದ ಬಾಳಬೇಕು. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಊರಿನ ಮುಖಂಡರುಗಳೇ ಸಮಸ್ಯೆಯನ್ನು ಸರಿಪಡಿಸಿಕೊಳ್ಳಲಿ. ಇಲ್ಲಾ ಪೊಲೀಸ್ ಇಲಾಖೆಯ ಎದುರಿಗೆ ತಂದರೆ ಅದನ್ನು ಸರಿಪಡಿಸಲು ಅನುಕೂಲವಾಗುತ್ತದೆ ಎಂದರು. ಇದೇ ವೇಳೆ ದಲಿತರು ಹಾಗೂ ಸವರ್ಣೀಯ ಸಮುದಾಯದ ಮುಖಂಡರುಗಳಿಗೆ ಪರಸ್ಪರ ಹಸ್ತಲಾಘವ ಮಾಡಿಸುವ ಮೂಲಕ ಸಹೋದರತೆ ಭಾವನೆ ನೆಲೆಯೂರಲಿ ಎಂದು ಶುಭ ಹಾರೈಸಿದರು.
ಈ ವೇಳೆ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋದ್ದಾರ, ತಹಶೀಲ್ದಾರ್ ಅನಿಲಕುಮಾರ ಢವಳಗಿ, ಡಿವೈಎಸ್ ಪಿ ಈ. ಶಾಂತವೀರ, ಸಿಪಿಐ ಆನಂದ ವಾಘ್ಮೋಡೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಶಶಿಕಾಂತ ಶಿವಪೂರೆ, ಪಿ.ಎಸ್.ಐ ಎಸ್.ಹೆಚ್.ಪವಾರ, ಗ್ರಾಮದ ಹಾಗೂ ವಿವಿಧ ದಲಿತಪರ ಸಂಘಟನೆಗಳ ಮುಖಂಡರುಗಳು ಹಾಜರಿದ್ದರು.