ವಿಜಯಪುರ: ನಗರ ವಿಮಾನ ನಿಲ್ದಾಣಕ್ಕೆ ಅನುದಾನ ಬಿಡುಗಡೆ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ ಮೇಲೆ ಮಾಡಿದ ಆರೋಪವನ್ನು ಸಂಸದ ರಮೇಶ್ ಜಿಗಜಿಣಗಿ ತಳ್ಳಿ ಹಾಕಿದ್ದಾರೆ. ಏಕಾಏಕಿ ವಿಜಯಪುರ ವಿಮಾನ ನಿಲ್ದಾಣಕ್ಕೆ ಅಮೆರಿಕಾ ವಿಮಾನ ಬರಬೇಕು ಎಂದು ಬಯಸಿದರೆ ಸಾಧ್ಯನಾ ಎಂದು ಯತ್ನಾಳ್ಗೆ ಟಾಂಗ್ ನೀಡಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಶಿವಮೊಗ್ಗ ಹಾಗೂ ವಿಜಯಪುರದಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಏಕಕಾಲದಲ್ಲಿ ಚಾಲನೆ ನೀಡಲಾಗಿದೆ. ಶಿವಮೊಗ್ಗಕ್ಕೆ ಹೆಚ್ಚು ಅನುದಾನ, ವಿಜಯಪುರಕ್ಕೆ ಕಡಿಮೆ ಅನುದಾನ ನೀಡಲಾಗಿದೆ ಎಂದು ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪರೋಕ್ಷವಾಗಿ ಹೆಸರು ತೆಗೆದುಕೊಳ್ಳದೇ ತಿರುಗೇಟು ನೀಡಿದರು. ವಿಮಾನ ನಿಲ್ದಾಣ ಕಾಮಗಾರಿ ಹಂತ ಹಂತವಾಗಿ ನಡೆಯುತ್ತಿದೆ. ಅದಕ್ಕೆ ಅನುಗುಣವಾಗಿ ಸರ್ಕಾರ ಹಣ ಬಿಡುಗಡೆ ಮಾಡಿದೆ. ಅದರಲ್ಲಿ ಶಿವಮೊಗ್ಗ, ವಿಜಯಪುರಕ್ಕೆ ತಾರತಮ್ಯ ಮಾಡುವ ಪ್ರಶ್ನೆ ಬರುವುದಿಲ್ಲ. ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ನಿಗದಿಗಿಂತ ಮುಂಚೆ ಮುಗಿಸಲು ಶ್ರಮಿಸುತ್ತಿದ್ದೇನೆ. ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡುವುದು ಸರಿಯಲ್ಲ. ನಾನು ವಿಮಾನ ನಿಲ್ದಾಣ ಕಾಮಗಾರಿ ಮುಗಿಯುವವರೆಗೆ ವಿಶ್ರಾಂತಿ ತೆಗೆದುಕೊಳ್ಳುವುದಿಲ್ಲ ಎಂದರು.
ಮುಂದಿನ ಬಾರಿ ರಾಜ್ಯದಲ್ಲಿ ದಲಿತ ಸಿಎಂ
ರಾಜ್ಯದಲ್ಲಿ ಮುಂದಿನ ಬಾರಿ ದಲಿತ ಸಿಎಂ ಆಗುವುದು ನಿಶ್ಚಿತ. ಎಲ್ಲ ವರ್ಗದವರಿಗೂ ಸಿಎಂ ಸ್ಥಾನ ಸಿಗುವುದಾದರೆ ದಲಿತರಿಗೆ ಏಕಿಲ್ಲ. ಸ್ವಲ್ಪ ತಡವಾಗಿದೆ, ಆದರೆ ರಾಜ್ಯದಲ್ಲಿ ದಲಿತ ಸಿಎಂ ಆಗುವುದು ಸತ್ಯ ಎಂದರು. ನಾನು ಸಿಎಂ ರೇಸ್ನಲ್ಲಿ ಇಲ್ಲ. ರಾಜ್ಯದಲ್ಲಿ ಶೇ 23ರಷ್ಟು ದಲಿತರು ಇರುವಾಗ ಏಕೆ ಸಿಎಂ ಆಗಬಾರದು ಎಂದು ಪ್ರಶ್ನಿಸಿದರು. ಒಂದಲ್ಲ ಒಂದು ದಿನ ದೇವರೇ ದಲಿತ ಸಿಎಂನನ್ನು ಮಾಡುತ್ತಾರೆ ಎಂದರು. ತಮಗೆ ರಾಜ್ಯ ರಾಜಕಾರಣಕ್ಕೆ ಬರುವ ಇಚ್ಛೆ ಇಲ್ಲ. ಪಕ್ಷ ಬಯಸಿದರೆ ಮಾತ್ರ ರಾಜ್ಯ ರಾಜಕಾರಣಕ್ಕೆ ಮರಳಲು ಸಿದ್ಧ ಎಂದರು.