ವಿಜಯಪುರ: ಕಾನೂನು ಬಿಗಿಯಾಗಿದ್ದರೂ ಕೂಡ ಬಾಲ್ಯವಿವಾಹ ಎಗ್ಗಿಲ್ಲದೇ ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲಂತೂ ಇಂತಹ ಪ್ರಕರಣ ಹೆಚ್ಚಾಗಿವೆ. ಕಳೆದ ವರ್ಷ ಮಾರ್ಚ್ ಅಂತ್ಯದಲ್ಲಿ ಕೊರೊನಾ ವಕ್ಕರಿಸಿದ ಮೇಲೆ ಎಲ್ಲೆಡೆ ಲಾಕ್‌ಡೌನ್ ಘೋಷಣೆಯಾಯಿತು. ದುಡಿಯಲು ಹೋಗಿದ್ದ ಕಾರ್ಮಿಕರು ವಾಪಸ್ ಗ್ರಾಮದತ್ತ ಮುಖ ಮಾಡಿದ್ದರು. ಈ ಸಂದರ್ಭವು ಬಾಲ್ಯವಿವಾಹಗಳಿಗೆ ದಾರಿ ಮಾಡಿತ್ತು.
ಇತ್ತೀಚೆಗೆ ಪರಿಷತ್ನಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯದಲ್ಲಿ ಕೊರೊನಾ ವೇಳೆ ಬಾಲ್ಯ ವಿವಾಹಗಳು ಹೆಚ್ಚಾಗಿವೆ ಎಂದು ಒಪ್ಪಿದ್ದರು. ಕೊರೊನಾ ವೇಳೆ ಸರ್ಕಾರವೇ 1,918 ಬಾಲ್ಯವಿವಾಹ ತಡೆದಿದೆ. ಇನ್ನು, ಮಂಡ್ಯ ಜಿಲ್ಲೆಯಲ್ಲಿ 68, ರಾಮನಗರ 51, ಶಿವಮೊಗ್ಗ 31,ವಿಜಯಪುರ ಜಿಲ್ಲೆಯಲ್ಲಿ ಕೇವಲ 1 ಪ್ರಕರಣ ತಡೆಯಲಾಗಿದೆ ಎಂದು ಅಂಕಿ-ಅಂಶಗಳು ಹೇಳ್ತವೆ.
ಆದರೆ, ಸರ್ಕಾರದ ಅಂಕಿ-ಅಂಶಗಳನ್ನು ಪ್ರಶ್ನಿಸುವ ಪ್ರಕರಣ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಕೊವಿಡ್ ವೇಳೆ 10 ತಿಂಗಳಲ್ಲಿ 141 ಬಾಲ್ಯ ವಿವಾಹ ಪ್ರಕರಣ ಬೆಳಕಿಗೆ ಬಂದಿವೆ. ಇದರಲ್ಲಿ ಎನ್ಜಿಒಗಳು 121 ಬಾಲ್ಯ ವಿವಾಹ ತಡೆದಿವೆ.
ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಸರ್ಕಾರ ನೀಡಿದ ಅಂಕಿ-ಅಂಶಕ್ಕೂ, ಎನ್ಜಿಒಗಳು ನೀಡಿದ ಅಂಕಿಸಂಖ್ಯೆಗಳಿಗೂ ತಾಳೆ ಆಗ್ತಿಲ್ಲ. ಇವು ಕೇವಲ ಅಧಿಕೃತವಾಗಿ ದೊರೆತ ಅಂಕಿ ಅಂಶಗಳು, ಇದರ ಆಚೆಯೂ ನೂರಾರು ಬಾಲ್ಯ ವಿವಾಹಗಳು ನಡೆದಿವೆ ಎಂದು ತಿಳಿದು ಬಂದಿದೆ.
ಓದಿ: ಲಾಕ್‌ಡೌನ್ ಶಾಲೆ ಬಂದ್ ಅವಧಿಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಳ
ಆದರೂ ಜಿಲ್ಲೆಯಲ್ಲಿ ಬಾಲ್ಯ ವಿವಾಹ ತಡೆಗಟ್ಟಬೇಕಾದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಿತಿ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೊವಿಡ್ ವೇಳೆ ಶಿಕ್ಷಕರಾಗಲಿ, ಸಮಿತಿ ಸದಸ್ಯರಾಗಲಿ ಗ್ರಾಮೀಣ ಭಾಗದತ್ತ ಸುಳಿದಿಲ್ಲ. ಕೇವಲ ವಿದ್ಯಾಗಮನ ಬಿಟ್ಟು ವಿದ್ಯಾರ್ಥಿನಿಯರ ಸಮಸ್ಯೆ ಆಲಿಸದಿರುವುದು ಕೂಡ ಬಾಲ್ಯ ವಿವಾಹ ನಡೆಯಲು ಒಂದು ಕಾರಣವಂತೆ.
ಜಿಲ್ಲೆಯ ಜನ ದುಡಿಯಲು ಗೋವಾ, ಮಹಾರಾಷ್ಟ್ರ ಸೇರಿ ಇನ್ನಿತರೆ ರಾಜ್ಯಗಳಿಗೆ ಗುಳೆ ಹೋಗುವ ಕುಟುಂಬಗಳಲ್ಲಿ ಹೆಚ್ಚಾಗಿ ಬಾಲ್ಯವಿವಾಹ ಪ್ರಕರಣ ದಾಖಲಾಗುತ್ತಿವೆ. ಕೋವಿಡ್ನಂತಹ ಕಷ್ಟ ಕಾಲದಲ್ಲಿ 10 ತಿಂಗಳು ಮನೆಯಲ್ಲೇ ಕಾಲ ಕಳೆದಿರುವುದು ಬಾಲ್ಯ ವಿವಾಹ ಹೆಚ್ಚಳಕ್ಕೆ ಕಾರಣ ಅಂತಿದ್ದಾರೆ ಶಿಕ್ಷಣ ತಜ್ಞರು.