ಮುದ್ದೇಬಿಹಾಳ: ಕೊರೊನಾ ಹಾವಳಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಅನ್ಯ ರಾಜ್ಯಗಳಿಗೆ ದುಡಿಯಲು ಹೋಗಿದ್ದ ವೇಳೆ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಅವರನ್ನು ಸುರಕ್ಷಿತವಾಗಿ ಊರಿಗೆ ಕರೆತರಲು ವೈಯಕ್ತಿಕವಾಗಿ ಮೂರು ಕೋಟಿ ರೂ. ಖರ್ಚು ಮಾಡಿದ್ದೇನೆ ಎಂದು ಆಹಾರ ನಿಗಮದ ಅಧ್ಯಕ್ಷ, ಶಾಸಕ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದರು.
ತಾಲೂಕಿನ ಆರೇಮುರಾಳ ಗ್ರಾಮದಲ್ಲಿ ಪಿಡಬ್ಲ್ಯೂಡಿ ಇಲಾಖೆಯ ವತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ಮತಕ್ಷೇತ್ರದ 65 ಸಾವಿರಕ್ಕೂ ಅಧಿಕ 1ರಿಂದ 10ನೇ ತರಗತಿಯ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸುವುದಾಗಿ ತಿಳಿಸಿದರು.
ರಾಜ್ಯ ಸರ್ಕಾರ ಸಪ್ತಪದಿ ಯೋಜನೆ ಅಡಿ ವಿವಾಹವಾಗುವ ವಧು-ವರರಿಗೆ 50 ಸಾವಿರ ರೂ. ಪ್ರೋತ್ಸಾಹಧನ ನೀಡಲಿದೆ. ತಾಲೂಕಿನ ಬಸರಕೋಡದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ಈ ಯೋಜನೆಯಡಿ ಮದುವೆಗಳನ್ನು ಮಾಡಲು ನಿರ್ಧರಿಸಲಾಗಿದೆ. ಸಪ್ತಪದಿ ಯೋಜನೆ ಅನುಷ್ಠಾನಕ್ಕೆ ದಿನಾಂಕಗಳನ್ನು ನಿಗದಿ ಮಾಡಲಾಗುವುದು ಎಂದರು.
ಈ ವೇಳೆ ಬಿಜೆಪಿ ಮುಖಂಡ ಎಂ.ಎಸ್.ಪಾಟೀಲ, ಬಿ.ಬಿ.ಭೋವಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ನಿಂಗಣ್ಣ ರಾಮೋಡಗಿ, ಎಸ್.ಬಿ.ಚಲವಾದಿ ಮೊದಲಾದವರು ಉಪಸ್ಥಿತರಿದ್ದರು.