ವಿಜಯಪುರ : ರಸ್ತೆ ಅಪಘಾತದಲ್ಲಿ ನರಳುತ್ತಿದ್ದ ಐವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ನಾಗಠಾಣ ಶಾಸಕ ದೇವಾನಂದ ಚೌಹಾಣ್ ಅವರು ಮಾನವೀಯತೆ ಮೆರೆದಿರುವ ಘಟನೆ ನಡೆದಿದೆ. ದೇವರಹಿಪ್ಪರಗಿ ಸಿಂದಗಿ ರಸ್ತೆಯಲ್ಲಿ ಬಸ್ ಹಾಗೂ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಜೀವನ್ಮರಣದ ನಡುವೆ ಹೋರಾಡ್ತಿದ್ದ ಐವರ ಪ್ರಾಣ ರಕ್ಷಣೆ ಮಾಡಿದ್ದಾರೆ. ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ಅಪಘಾತವಾಗಿ ಐವರು ನರಳಾಡುತ್ತಿದ್ದಾಗ ಅದೇ ಮಾರ್ಗವಾಗಿ ಬರುತ್ತಿದ್ದ ಶಾಸಕ ದೇವಾನಂದ ಚೌಹಾಣ್ ಗಾಯಾಳುಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲು ಆಂಬ್ಯುಲೆನ್ಸ್ಗೆ ಕರೆ ಮಾಡಿದ್ದಾರೆ. ಆಂಬ್ಯುಲೆನ್ಸ್ ಹಿಂದುಗಡೆ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲು ಶಾಸಕರ ಕಾರು ಸಹ ಹಿಂಬಾಲಿಸಿದೆ. ದೇವರಹಿಪ್ಪರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಮಗನ ಬರ್ಬರ ಹತ್ಯೆ ಮಾಡಿದ ತಂದೆ (ಚಿಕ್ಕೋಡಿ): ಇನ್ನೊಂದೆಡೆ ತಂದೆಯೊಬ್ಬ ತನ್ನ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಬಿ ಕೆ ಗ್ರಾಮದಲ್ಲಿ ನಡೆದಿದೆ. ಆರೋಪಿ ಜಿನ್ನಪ್ಪಾ ಕಾಂಜಿ ಕೊಲೆಯ ಆರೋಪಿ. ಭರತೇಶ ಜಿನ್ನಪ್ಪಾ ಕಾಂಜಿ (30) ಕೊಲೆಗೀಡಾದ ವ್ಯಕ್ತಿ. ಜಿನ್ನಪ್ಪಾ ಕಾಂಜಿ ಮಗನ ತಲೆಯ ಹಿಂಭಾಗಕ್ಕೆ ಹರಿತವಾದ ಆಯುಧದಿಂದ ಹೊಡೆದು ಕೃತ್ಯ ಎಸಗಿದ್ದಾರೆ ಎಂಬುದು ತಿಳಿದುಬಂದಿದೆ.
ಪ್ರಕರಣದ ವಿವರ : ಭರತೇಶ್ ಕಾಂಜಿ ಮದ್ಯ ವ್ಯಸನಿ ಆಗಿದ್ದು ನಿತ್ಯ ಮನೆಯಲ್ಲಿ ಹಣಕ್ಕಾಗಿ ಪೀಡಿಸುತ್ತಿದ್ದ. ಮನೆಯಲ್ಲಿರುವ ವಸ್ತುಗಳನ್ನು ಮಾರಾಟ ಮಾಡಿ ಮದ್ಯಪಾನ ಮಾಡುತ್ತಿದ್ದ. ಪದೇ ಪದೆ ಕುಟುಂಬಸ್ಥರೊಂದಿಗೆ ಜಗಳವಾಡುತ್ತಿದ್ದ. ಮಂಗಳವಾರ ಜಗಳ ತಾರಕಕ್ಕೇರಿತ್ತು. ಕುಪಿತಗೊಂಡ ಜಿನ್ನಪ್ಪಾ ಕೈಯಲ್ಲಿದ್ದ ಹರಿತವಾದ ಆಯುಧದಿಂದ ಭರತೇಶ್ ತಲೆಗೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಭರತೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗನಿಗೆ ಗುಂಡಿಟ್ಟು ಕೊಂದಿದ್ದ ತಂದೆ : ಕೌಟುಂಬಿಕ ಕಲಹದ ಹಿನ್ನೆಲೆ ತಂದೆಯೇ ಮಗನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ಇದೇ ತಿಂಗಳು ನಡೆದಿತ್ತು. ಪುತ್ರ ನಿರೆನ್ (28) ಹತ್ಯೆಗೈದು ತಂದೆ ನಂದೇಟಿರ ಚಿಟ್ಟಿಯಪ್ಪ ಪೊಲೀಸರಿಗೆ ಶರಣಾಗಿದ್ದರು. ತಂದೆ ಮತ್ತು ಮಗ ಇಬ್ಬರೂ ಕೂಡ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.
ಇದನ್ನೂ ಓದಿ : ಬೆಂಗಳೂರು: ನಾಪತ್ತೆಯಾಗಿದ್ದ ವ್ಯಕ್ತಿ, ಆತನದ್ದೇ ಮನೆಯಲ್ಲಿ ಹತ್ಯೆಯಾದ ಸ್ಥಿತಿಯಲ್ಲಿ ಪತ್ತೆ
ನಿರೆನ್ ತೋಟ ಮತ್ತು ಮನೆಗೆಲಸ ಮಾಡಿಕೊಂಡು ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದರು. ಆದರೆ, ಇಷ್ಟೆಲ್ಲ ಕೆಲಸ ಮಾಡಿದರೂ ಅಪ್ಪ ಮಗನ ನಡುವೆ ಸಣ್ಣಪುಟ್ಟ ಗಲಾಟೆಗಳು ನಡೆಯುತ್ತಿದ್ದವು. ಗಲಾಟೆ ತೀವ್ರ ವಿಕೋಪಕ್ಕೆ ತಿರುಗಿದ್ದು, ತಂದೆ ನಂದೇಟಿರ ಚಿಟ್ಟಿಯಪ್ಪ ಮನೆಯಲ್ಲಿದ್ದ ಬಂದೂಕಿನಿಂದ ನಿರೆನ್ ಮೇಲೆ ಗುಂಡುಹಾರಿಸಿ ಕೊಲೆ ಮಾಡಿ, ನಂತರ ಮಡಿಕೇರಿ ಪೊಲೀಸ್ ಠಾಣೆಗೆ ಶರಣಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ : ದಾವಣಗೆರೆ: ಸ್ನೇಹಿತನ ಕೊಲೆಗೈದು ಪೊಲೀಸರಿಗೆ ಶರಣಾದ ಆರೋಪಿ