ವಿಜಯಪುರ: ದೆಹಲಿಯ ಕೆಂಪುಕೋಟೆ ಮೇಲೆ ರಾಷ್ಟ್ರಧ್ವಜದ ಬದಲು ಬೇರೆ ಧ್ವಜ ಹಾರಿಸಿರುವ ದುಷ್ಕೃತ್ಯದ ಹಿಂದೆ ಪಾಕಿಸ್ತಾನ, ಚೀನಾ ಹಾಗೂ ನಮ್ಮ ದೇಶದಲ್ಲಿ ಹತಾಶೆಗೊಂಡಿರುವ ಪಕ್ಷಗಳ ಕೈವಾಡವಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ದೇಶದ ಪ್ರಧಾನಿ ನರೇಂದ್ರ ಅವರ ವರ್ಚಸ್ಸು ಸಹಿಸಲಾಗದೇ ಕಾಂಗ್ರೆಸ್, ಕಮ್ಯುನಿಸ್ಟ್ , ಆಮ್ಆದ್ಮಿ ಪಕ್ಷಗಳು ಉದ್ದೇಶಪೂರ್ವಕವಾಗಿ ಕೆಂಪುಕೋಟೆ ಮೇಲೆ ಬೇರೆ ಧ್ವಜ ಹಾರಿಸಲು ಪ್ರೇರೇಪಿಸಿದ್ದಾರೆ. ಇನ್ನೂ 20 ವರ್ಷವಾದರೂ ಬಿಜೆಪಿ ಅಧಿಕಾರದಲ್ಲಿ ಮುಂದುವರೆಯುತ್ತದೆ ಎನ್ನುವ ಹತಾಶೆ ಭಾವನೆಯಿಂದ ಇಂಥ ಕೃತ್ಯಕ್ಕೆ ಕುಮ್ಮಕ್ಕು ನೀಡಲಾಗಿದೆ" ಎಂದು ಶಂಕೆ ವ್ಯಕ್ತಪಡಿಸಿದರು.
ಹೊರಗಡೆಯಿಂದ ಪಾಕಿಸ್ತಾನ, ಚೀನಾ ದೇಶಗಳು ಪರೋಕ್ಷವಾಗಿ ಬೆಂಬಲ ನೀಡುತ್ತಿವೆ. ಈ ಕೃತ್ಯಕ್ಕೆ ಪಾಕಿಸ್ತಾನ ಹಾಗೂ ಚೀನಾದ ಫಂಡಿಂಗ್ ಇದೆ. ಕಾಂಗ್ರೆಸ್ ಸಹ ಪರೋಕ್ಷವಾಗಿ ಹೋರಾಟಗಾರರಿಗೆ ಹಣಕಾಸಿನ ನೆರವು ನೀಡಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಉಗ್ರಪ್ಪನಂತವರು ಹಾಗೂ ವಿವಿಧ ಪಕ್ಷಗಳ ಮುಖಂಡರು ಅಧಿಕಾರ ದಾಹಕ್ಕಾಗಿ ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ. ಇಂಥವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಯತ್ನಾಳ್ ಆಗ್ರಹಿಸಿದರು.
ಕೇಂದ್ರ ಗುಪ್ತಚರ ಇಲಾಖೆಗೆ ಮೊದಲೇ ಮಾಹಿತಿ ಇತ್ತು. ಆದರೆ ಸುಪ್ರಿಂ ಕೋರ್ಟ್ ರೈತರ ಹೋರಾಟಕ್ಕೆ ಅನುಮತಿ ನೀಡಿದ ಕಾರಣ ಗುಪ್ತಚರ ಇಲಾಖೆ ಕೈಕಟ್ಟಿಕುಳಿತುಕೊಳ್ಳಬೇಕಾಯಿತು ಎಂದರು.