ಮುದ್ದೇಬಿಹಾಳ (ವಿಜಯಪುರ): ಮತಕ್ಷೇತ್ರದಲ್ಲಿ ಕೆಲವರು ಕುತಂತ್ರದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಅದಕ್ಕೆ ಜಯ ಸಿಗುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದ್ದು, ಸತ್ಯಕ್ಕೆ, ನ್ಯಾಯಕ್ಕೆ ಜಯ ಸಿಕ್ಕಿದೆ ಎಂದು ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಮೊದಲು ಕಾನೂನು ಓದಿ ಅಧ್ಯಯನ ಮಾಡಿ ತಿಳಿದುಕೊಂಡು ರಾಜಕಾರಣ ಮಾಡಲಿ. ಅದು ಬಿಟ್ಟು ಕುತಂತ್ರದಿಂದ ರಾಜಕಾರಣ ಮಾಡಿದರೆ ಅದಕ್ಕೆ ಯಶಸ್ಸು ಸಿಗುವುದಿಲ್ಲ. ಇನ್ನು ಮೇಲಾದರೂ ಅವರು ಬುದ್ದಿ ಕಲಿತುಕೊಳ್ಳಬೇಕು. ಕುತಂತ್ರಕ್ಕೆ ಗೆಲುವು ಆಗುವುದಕ್ಕೆ ನಡಹಳ್ಳಿ ಬಿಡುವುದಿಲ್ಲ ಎಂದು ಹೇಳಿದರು.
ಚುನಾವಣಾಧಿಕಾರಿಗಳು ಹಾದಿ ಬೀದಿಯಲ್ಲಿ ಹೋಗುವವರ ಅರ್ಜಿಗಳನ್ನೆಲ್ಲಾ ಪರಿಗಣಿಸಲು ಸಾಧ್ಯವಿಲ್ಲ. ಅಧಿಕೃತವಾಗಿ ಇಬ್ಬರ ನಾಮಪತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಾತಿ ಪ್ರಮಾಣ ಪತ್ರ ರದ್ದಾಗಿದ್ದರಿಂದ ಅವರ ನಾಮಪತ್ರ ತಿರಸ್ಕಾರಗೊಂಡಿದೆ. ನಿಯಮಾವಳಿ ಅನ್ವಯವೇ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದೆ ಎಂದು ಹೇಳಿದರು.
ಕಳೆದ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ನನ್ನ ಅಭಿಮಾನಿಗಳು ಸ್ಪರ್ಧೆ ಮಾಡಿದ್ದರು. ಆಗ ತಾಲೂಕಿನಲ್ಲಿ ಐವರು ಜೆಡಿಎಸ್‌ನಿಂದ ಆಯ್ಕೆಯಾಗಿದ್ದರು. ನಾನು ಬಿಜೆಪಿ ಸೇರ್ಪಡೆ ನಂತರ ಐವರು ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಸದಸ್ಯರು ಬಿಜೆಪಿಯಲ್ಲಿ ಸೇರ್ಪಡೆಯಾಗಿದ್ದರು. ಈಗ ಅವರು ಅಧಿಕೃತವಾಗಿ ಬಿಜೆಪಿ ಸದಸ್ಯರಾಗಿರುತ್ತಾರೆ. ಈ ಹಿನ್ನೆಲೆಯಲ್ಲಿ ತಾಪಂ ಅಧ್ಯಕ್ಷ ಸ್ಥಾನ ಬಿಜೆಪಿಗೆ ಒಲಿದಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತಾಪಂ ಅಧ್ಯಕ್ಷೆ ಲಕ್ಷ್ಮಿಬಾಯಿ ಹವಾಲ್ದಾರ್, ತಾಳಿಕೋಟಿ ತಾಪಂ ಅಧ್ಯಕ್ಷ ರಾಜುಗೌಡ ಕೋಳೂರು, ಮಂಡಲ ಅಧ್ಯಕ್ಷ ಪರಶುರಾಮ ಪವಾರ, ಉಪಾಧ್ಯಕ್ಷ ಮಂಜುನಾಥಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಪಾಟೀಲ ಕವಡಿಮಟ್ಟಿ, ನ್ಯಾಯವಾದಿ ಎಸ್.ಎಚ್.ಲೊಟಗೇರಿ ಹಾಗೂ ಪಕ್ಷದ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಸಾಮಾಜಿಕ ಅಂತರ ಮರೆತು ವಿಜಯೋತ್ಸವ:
ನೂತನ ಅಧ್ಯಕ್ಷೆಯಾಗಿ ಲಕ್ಷ್ಮಿಬಾಯಿ ಹವಾಲ್ದಾರ್ ಆಯ್ಕೆಯಾಗುತ್ತಿದ್ದಂತೆ ಅವರ ಬೆಂಬಲಿಗರು ಸಾಮಾಜಿಕ ಅಂತರ ಮರೆತು ವಿಜಯೋತ್ಸವ ಆಚರಿಸಿದರು. ಕೊರೊನಾ ವೈರಸ್ ಹಾವಳಿ ನಿಯಂತ್ರಣಗೊಳಿಸಲು ಸಲಹೆ ನೀಡಬೇಕಾದ ಜನಪ್ರತಿನಿಧಿಗಳೇ ಹರ್ಷದ ಸಡಗರದಲ್ಲಿ ಸಾಮಾಜಿಕ ಅಂತರ ಮರೆತಿದ್ದು, ಸಾರ್ವಜನಿಕರ ಟೀಕೆಗೆ ಗುರಿಯಾಯಿತು.