ವಿಜಯಪುರ : ಮುಂದಿನ ಮುಖ್ಯಮಂತ್ರಿ ಹುದ್ದೆಗಾಗಿ ಎರಡು ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಇತರ ಸ್ಥಳೀಯ ಪಕ್ಷಗಳು ತರಹೇವಾರಿ ಕಸರತ್ತು ನಡೆಸುತ್ತಿವೆ. ಈ ನಡುವೆ ಪಕ್ಷ - ಪಕ್ಷದ ಒಳಗೆಯೇ ತಾ ಮುಂದು ನಾ ಮುಂದು ಎಂದು ಹಲವು ನಾಯಕರು ಸಿಎಂ ಸ್ಥಾನಕ್ಕಾಗಿ ಟವೆಲ್ ಹಾಕುತ್ತಿದ್ದಾರೆ. ಇದಕ್ಕೆ ಸಚಿವ ಉಮೇಶ್ ಕತ್ತಿ ಸಹ ಹೊರತಾಗಿಲ್ಲ.
ಇದನ್ನೂ ಓದಿ: ಸಿದ್ದರಾಮಯ್ಯ, ಪರಂ ಆಯ್ತು ಈಗ ಡಿಕೆಶಿ ಸರದಿ: Next CM ಎಂದು ಘೋಷಣೆ ಕೂಗಿದ ಅಭಿಮಾನಿಗಳು
ಕಾಂಗ್ರೆಸ್ನಲ್ಲಿ ಡಿ ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಣಗಳ ನಡುವೆ ಸಿಎಂ ಕುರ್ಚಿಗಾಗಿ ಅತ್ತ ಪೈಪೋಟಿ ನಡೆಯುತ್ತಿದೆ. ಇತ್ತ ಬಿಜೆಪಿಯಲ್ಲಿ ಸಹ ಮುಂದಿನ ಮುಖ್ಯಮಂತ್ರಿ ಚರ್ಚೆ ತಾರಕಕ್ಕೇರಿದೆ. ಸಿಎಂ ಬದಲಾವಣೆ ನಡುವೆ ಸಚಿವ ಉಮೇಶ್ ಕತ್ತಿ ಸಹ ಮುಂದಿನ ಮುಖ್ಯಮಂತ್ರಿ ಆಗುವ ಬಗ್ಗೆ ತಮ್ಮ ಮನದಿಂಗಿತ ವ್ಯಕ್ತಪಡಿಸಿದ್ದಾರೆ.
ನಾನೇಕೆ ಸಿಎಂ ಆಗಬಾರದು?
ಜಿಲ್ಲೆಯ ಆಲಮಟ್ಟಿಯಲ್ಲಿ ಮಾತನಾಡಿದ ಅವರು, ನಾನೇಕೆ ಮುಖ್ಯಮಂತ್ರಿ ಆಗಬಾರದು? 8 ಸಲ ಶಾಸಕನಾಗಿ ಆಯ್ಕೆ ಆಗಿದ್ದೇನೆ. ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಜಿಲ್ಲೆ ಸೇರಿದಂತೆ ರಾಜ್ಯದ ಜನರ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ಹೀಗಾಗಿ, ಸಿಎಂ ಆಗುವ ಅರ್ಹತೆ ನನಗೂ ಇದೆ ಎಂದು ತಮ್ಮ ಅಭಿಲಾಷೆ ವ್ಯಕ್ತಪಡಿಸಿದರು.
ಇನ್ನೂ, ಎರಡೂವರೆ ವರ್ಷ ಯಡಿಯೂರಪ್ಪನವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎನ್ನುವ ಮೂಲಕ ಸಿಎಂ ಬಿಎಸ್ವೈ ಪರ ಮತ್ತೆ ಬ್ಯಾಟಿಂಗ್ ಬೀಸಿದರು. ದೇವರ ಆಶೀರ್ವಾದ ಹಾಗೂ ಈ ಭಾಗದ ಜನರ ಆಶೀರ್ವಾದ ಇದ್ದರೆ ನಾನೂ ಮುಂದಿನ ಸಿಎಂ ಆಗೇ ಆಗುತ್ತೇನೆ ಎಂದರು.