ವಿಜಯಪುರ: ಒಂದೇ ಏರಿಯಾದಲ್ಲಿ 21 ಕೊರೊನಾ ಕೇಸ್ ಪತ್ತೆಯಾದ ಹಿನ್ನೆಲೆ ಚಪ್ಪರಬಂದ್ ಪ್ರದೇಶವನ್ನು ಕಂಟೈನ್ಮೆಂಟ್ ಏರಿಯಾ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾರೂ ಮನೆಯಿಂದ ಹೊರ ಬರದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ ಎಂದರು.
ಗ್ರಾಮೀಣ ಭಾಗಕ್ಕೂ ಎಂಟ್ರಿ ಕೊಟ್ಟ ಕೊರೊನಾ: ಜಿಲ್ಲೆಯ ರತ್ನಾಪುರ ಗ್ರಾಮಕ್ಕೆ ಕೊರೊನಾ ಎಂಟ್ರಿ ಕೊಟ್ಟಿದೆ. ಗ್ರಾಮದಲ್ಲಿ ಜನರು ಓಡಾಟ ನಡೆಸದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.
ರೋಗಿ ನಂ.374 ಮೂಲಕ ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮಕ್ಕೆ ಕೊರೊನಾ ಸೋಂಕು ಕಾಲಿಟ್ಟಿದೆ. ಏಪ್ರಿಲ್ 16ರಂದೇ ವ್ಯಕ್ತಿ ಮೃತಪಟ್ಟಿದ್ದು, ಈತನ ವರದಿ ನಿನ್ನೆಯಷ್ಟೆ ಪಾಸಿಟಿವ್ ಬಂದಿದೆ ಎಂದರು. ಈ ಹಿನ್ನೆಲೆ ರತ್ನಾಪುರ ಗ್ರಾಮದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗ್ರಾಮೀಣ ಭಾಗದ ಜನರಲ್ಲೂ ಆತಂಕ ಮನೆ ಮಾಡಿದೆ. ಜನ ಹೆದರುವ ಅವಶ್ಯಕತೆಯಿಲ್ಲ. ಗ್ರಾಮದಲ್ಲಿ ಸೋಂಕಿತನ ಮನೆ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ. ಆತನ ಸಂಪರ್ಕಕ್ಕೆ ಬಂದ ಕುಟುಂಬಸ್ಥರು, ಸಂಭಂದಿಕರು ಹಾಗೂ ಅಕ್ಕಪಕ್ಕದವರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದರು.