ವಿಜಯಪುರ : ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ನಾವು ಒಪ್ಪಿಕೊಳ್ಳಬೇಕು ಎಂದು ಪಂಚರಾಜ್ಯ ಚುನಾವಣಾ ಫಲಿತಾಂಶ ವಿಚಾರಕ್ಕೆ ಸಂಬಂಧಿಸಿದಂತೆ, ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿಂದು ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ನಿರೀಕ್ಷೆ ಹೆಚ್ಚಾಗಿತ್ತು. ಬಿಜೆಪಿಯ ವೈಫಲ್ಯ ಕೂಡಾ ಹೆಚ್ಚಾಗಿತ್ತು. ಅದೆಲ್ಲ ಗಣನೆಗೆ ತಗೊಂಡ ಜನ ಮತ ನೀಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಆ ನಿರೀಕ್ಷೆ ಯಾಕೆ ಈಡೇರಲಿಲ್ಲ ಎಂಬುದು ನಮ್ಮ ಪಕ್ಷದ ಹೈಕಮಾಂಡ್ ಮತ್ತು ಸಿಡ್ಬ್ಯೂಸಿಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ನಿರ್ಣಯ ಮಾಡಿ ಜನ ಮತ ಹಾಕುತ್ತಾರೆ : ಇನ್ನು ಇಂಡಿಯಾ ಒಕ್ಕೂಟಕ್ಕೆ ಆರಂಭಿಕ ಹಿನ್ನಡೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಸ್ಥಳೀಯ ಚುನಾವಣೆಯನ್ನ ಲೋಕಸಭಾ ಚುನಾವಣೆಗೆ ಹೋಲಿಕೆ ಮಾಡಿಕೊಳ್ಳಲು ಆಗಲ್ಲ. ರಾಜ್ಯದಲ್ಲಿ ನಾವು ಗೆದ್ದಿದ್ದೇವೆ. ಇದು ಪಾರ್ಲಿಮೆಂಟ್ ಚುನಾವಣೆಯ ದಿಕ್ಸೂಚಿ ಆಗುತ್ತಾ? ತೆಲಂಗಾಣದಲ್ಲಿ ಗೆದ್ದಿದ್ದೇವೆ. ಇದು ಕೂಡಾ ಅನ್ವಯ ಆಗಬೇಕಲ್ಲ. ವಿಧಾನಸಭಾ ಚುನಾವಣೆ ಬೇರೆ, ಲೋಕಸಭಾ ಚುನಾವಣೆ ಬೇರೆ. ರಾಜ್ಯಕ್ಕೆ ಯಾರು ಮುಖ್ಯಮಂತ್ರಿ ಆಗಬೇಕು, ಯಾವ ಸರ್ಕಾರ ಇರಬೇಕು ಎಂದು ನಿರ್ಣಯ ಮಾಡಿ ಜನ ಮತ ಹಾಕುತ್ತಾರೆ ಎಂದರು.
ಪಾರ್ಲಿಮೆಂಟ್ ಚುನಾವಣೆಯಲ್ಲಿ ಲೋಕಸಭೆಯಲ್ಲಿ ಯಾರಿರಬೇಕು ಎಂದು ನಿರ್ಣಯ ಮಾಡಿ ಜನ ಮತ ಹಾಕುತ್ತಾರೆ. ಆ ಚುನಾವಣೆಗೂ ಈ ಚುನಾವಣೆಗೂ ತುಲನೆ ಮಾಡಲು ಸಾಧ್ಯವಿಲ್ಲ. ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಅಲ್ಲಿ ಸೆಕ್ಯೂಲರ್ ಮತಗಳು ಕ್ರೋಢೀಕರಿಸಿ ಮತದಾನ ಆಗುತ್ತದೆ. ಹೀಗಾಗಿ ಅಲ್ಲಿ ನಿರೀಕ್ಷೆ ಹೊಂದಿದ್ದೇವೆ ಎಂದು ಸಚಿವ ಎಂ ಬಿ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಇದೇ ವೇಳೆ ಪಂಚರಾಜ್ಯ ಗೆಲ್ಲುತ್ತೇನೆ ಎಂದವರು ಕೇವಲ ಒಂದೇ ರಾಜ್ಯದಲ್ಲಿ ಗೆದ್ದಿದ್ದಾರೆ ಎಂಬ ಈಶ್ವರಪ್ಪನವರ ಹೇಳಿಕೆ ವಿಚಾರವಾಗಿ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಎಂ ಬಿ ಪಾಟೀಲ್, ಈಶ್ವರಪ್ಪನವರು ಬಹಳ ಮೇಧಾವಿಗಳು, ನಾನು ಬಹಳ ಸಣ್ಣವನು. ಹೀಗಾಗಿ ಅವರ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದಿದ್ದಾರೆ.
ನಿಮ್ಮ ಗ್ಯಾರಂಟಿ ವರ್ಕ್ ಆಯ್ತಾ.?: ಗ್ಯಾರಂಟಿ ಯೋಜನೆಗಳು ಪರಿಣಾಮ ಬೀರಿಲ್ಲ ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆ ವರ್ಕ್ ಆಗಿದೆ. ಹಾಗಿದ್ದರೆ ನೀವ್ಯಾಕೆ ಗ್ಯಾರಂಟಿ ಯೋಜನೆ ಅನೌನ್ಸ್ ಮಾಡಿದ್ದೀರಾ? ಕಾಂಗ್ರೆಸ್ ನವರು ಗ್ಯಾರಂಟಿ ಯೋಜನೆ ಕೊಡುತ್ತಿದ್ದಾರೆ ಎಂದು ಮೋದಿ ಅವರು ಟೀಕೆ ಮಾಡುತ್ತಿದ್ದರು. ಹಾಗಿದ್ದರೆ ನೀವ್ಯಾಕೆ ಗ್ಯಾರಂಟಿ ಯೋಜನೆ ಅನೌನ್ಸ್ ಮಾಡಿದ್ರಿ?. ಹಾಗಿದ್ದರೆ ನಿಮ್ಮ ಗ್ಯಾರಂಟಿ ವರ್ಕ್ ಆಯ್ತಾ.? ಎಂದು ಪ್ರಶ್ನಿಸಿದ್ದಾರೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಮತ ವಿಚಾರವಾಗಿ ಮಾತನಾಡುತ್ತಾ, ಇದು ನಮ್ಮ ಗೆಲುವಲ್ಲ, ಅಲ್ಲಿನ ಜನರ ಗೆಲುವು. ಯಾವುದೇ ಚುನಾವಣೆ ಇರಲಿ, ಅದು ಮತದಾರರ ಗೆಲುವು. ಮತದಾರರ ತೀರ್ಪು ಅಂತಿಮ. ಅಲ್ಲಿನ ಜನತೆ ಮತ ಹಾಕಿದ್ದಾರೆ, ಅವರಿಗೆ ಗೌರವ ಸಲ್ಲಬೇಕಾಗುತ್ತದೆ ಎಂಬ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಒಕ್ಕೂಟ ಎಂದು ತೀರ್ಮಾನ ಮಾಡಿಲ್ಲ: ಇಂಡಿಯಾ ಒಕ್ಕೂಟದ ಆರಂಭಿಕ ಸೋಲು ಎಂಬ ವಿಜಯೇಂದ್ರ ಹೇಳಿಕೆ ವಿಚಾರವಾಗಿ ನಾಗಠಾಣ ಮೀಸಲು ಮತಕ್ಷೇತ್ರದ ಶಾಸಕರಾದ ವಿಠಲ ಕಟಕದೊಂಡ ವಿಜಯಪುರದಲ್ಲಿ ಪ್ರತಿಕ್ರಿಯೆ ನೀಡಿದ್ದು, ಆಯಾ ರಾಜ್ಯದಲ್ಲಿ ಒಕ್ಕೂಟ ಎಂದು ತೀರ್ಮಾನ ಮಾಡಿಲ್ಲ. ಕೇಂದ್ರದಲ್ಲಿ ಒಕ್ಕೂಟ ಆಗಿದೆ. ರಾಜ್ಯದಲ್ಲಿ ಒಕ್ಕೂಟ ಎಂದು ತೀರ್ಮಾನ ಮಾಡಿಲ್ಲ. ಇದು ಒಕ್ಕೂಟದ ಪರವಾಗಿ ಚುನಾವಣೆ ಮಾಡಿಲ್ಲ, ಒಕ್ಕೂಟದಿಂದ ಕೂಡಿಕೊಂಡು ಚುನಾವಣೆ ಮಾಡಿದ್ದರೆ ನಾವು ಪ್ರಬಲವಾಗಿ ಗೆಲ್ಲಬಹುದಿತ್ತು. ಈ ಭಾವನೆ ಈಗ ಎಲ್ಲರ ಮನಸ್ಸಲ್ಲಿ ಬಂದಿದೆ ಎಂದಿದ್ದಾರೆ.
ಇದನ್ನೂ ಓದಿ : ಬಿಜೆಪಿಯವರು 9 ವರ್ಷಗಳಿಂದ ಸಿಬಿಐ, ಇಡಿ ಬಳಸಿಕೊಂಡು ರಾಜಕಾರಣ ಮಾಡ್ತಿದ್ದಾರೆ: ಎಂ.ಬಿ.ಪಾಟೀಲ್