ಮುದ್ದೇಬಿಹಾಳ: ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಿಂದ ಆಗಮಿಸಿರುವ ವಲಸೆ ಕಾರ್ಮಿಕರನ್ನು ಕ್ವಾರಂಟೈನ್ ಕೇಂದ್ರದಲ್ಲಿರಿಸಲಾಗಿದ್ದು, ಇದೀಗ ಅವರ ಗಂಟಲು ಮಾದರಿ ಸಂಗ್ರಹಕ್ಕೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಕಳೆದ ನಾಲ್ಕು ದಿನಗಳಿಂದ ವಲಸೆ ಕಾರ್ಮಿಕರ ಗಂಟಲು ದ್ರವದ ಮಾದರಿ ಸಂಗ್ರಹಕ್ಕೆ ಮುಂದಾಗಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಕ್ವಾರಂಟೈನ್ ಕೇಂದ್ರಗಳಿಗೆ ತೆರಳಿ ಸ್ಯಾಂಪಲ್ ಸಂಗ್ರಹಿಸುತ್ತಿದ್ದಾರೆ. ತಾಲೂಕಾಡಳಿತ ವೈದ್ಯಾಧಿಕಾರಿ ಡಾ. ಸತೀಶ ತಿವಾರಿ ಹಾಗೂ ಹಿರಿಯ ಪ್ರಯೋಗಾಲಯ ತಜ್ಞ ಐ.ಎಂ.ಚಿನಿವಾರ ಮೇಲ್ವಿಚಾರಣೆಯಲ್ಲಿ ಮುದ್ದೇಬಿಹಾಳ ಹಾಗೂ ತಾಳಿಕೋಟಿಯ ಎಲ್ಲಾ ಕ್ವಾರಂಟೈನ್ ಕೇಂದ್ರಗಳಲ್ಲಿ ಕಾರ್ಮಿಕರ ಗಂಟಲು ದ್ರವದ ಮಾದರಿ ಸಂಗ್ರಹ ಕಾರ್ಯ ನಡೆಯುತ್ತಿದೆ.
ಒಟ್ಟು 2,334 ಕಾರ್ಮಿಕರು ಕ್ವಾರಂಟೈನ್ನಲ್ಲಿದ್ದು, ಈಗಾಗಲೇ ಮೇ 20ರವರೆಗೆ 606 ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಅಗತ್ಯ ಸುರಕ್ಷತಾ ಸಾಮಗ್ರಿಗಳೊಂದಿಗೆ ವಲಸೆ ಕಾರ್ಮಿಕರ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸುವ ಕಾರ್ಯದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ತೊಡಗಿದ್ದಾರೆ.
ಮುದ್ದೇಬಿಹಾಳ ತಾಲೂಕಿನಲ್ಲಿ ಗಂಟಲು ದ್ರವ ಸಂಗ್ರಹಕ್ಕೆ ಪ್ರಯೋಗಾಲಯ ತಜ್ಞರಾದ ಮಹಮ್ಮದ್ ರಫೀಕ್ ಮುದ್ನಾಳ, ಇಸ್ಮಾಯಿಲ್ ಮೇತ್ರಿ, ವಿಜಯ ಮಹಾಂತೇಶ ಪವಾಡೆ ಶೆಟ್ಟಿ, ಸರಫರಾಜ್ ನಾಯ್ಕೋಡಿ, ಶಕೀಲ್ ನಾಯ್ಕೋಡಿ, ಅಬ್ದುಲ್ ಹಮೀದ ಪಟೇಲ್, ಬಸವರಾಜ ಇಜೇರಿ, ಸಚಿನ್ ರೋಡಗಿ, ರಾಜು ಬೋರಗಿ, ಆನಂದ ಬಿರಾದಾರ ಕಾರ್ಯಪ್ರವೃತ್ತರಾಗಿದ್ದಾರೆ.