ವಿಜಯಪುರ : ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ, ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ ಟಿ ರವಿ ಅವಾಚ್ಯ ಶಬ್ದ ಬಳಕೆ ಮಾಡಿದ್ದರೆ ಜನ ಅದನ್ನು ಸಹಿಸಲ್ಲ. ಈ ಬಗ್ಗೆ ಸಿ ಟಿ ರವಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಎಂ ಬಿ ಪಾಟೀಲ್ ಆಗ್ರಹಿಸಿದರು.
ನಗರದಲ್ಲಿ ಸಿದ್ಧರಾಮಯ್ಯ ವಿರುದ್ಧ ಸಿ ಟಿ ರವಿ ಅವಾಚ್ಯ ಶಬ್ದ ಬಳಕೆ ಮಾಡಿರುವ ವಿಚಾರವಾಗಿ ಮಾತನಾಡಿದ ಅವರು, ಸಿ ಟಿ ರವಿ ಹೇಳಿಕೆಯನ್ನು ನಾನು ನೋಡಿಲ್ಲ. ಒಂದು ವೇಳೆ ಆ ರೀತಿ ಪದಬಳಕೆ ಮಾಡಿದ್ದರೆ ಅದು ಸರಿಯಲ್ಲ. ಇದು ಸಿ ಟಿ ರವಿಗೆ ಇಂತಹ ಮಾತು ಗೌರವ ತರುವಂತದ್ದಲ್ಲ ಎಂದರು.
ಸಿದ್ದರಾಮಯ್ಯನವರು ಹಿರಿಯ ನಾಯಕರು. ಜನ ಈ ರೀತಿಯ ಹೇಳಿಕೆಯನ್ನು ಸಹಿಸಿಕೊಳ್ಳಲ್ಲ. ಸಿ ಟಿ ರವಿ ತಕ್ಷಣ ಕ್ಷಮೆಯಾಚಿಸಬೇಕು. ಇಲ್ಲದೆ ಹೋದರೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು. ಸಿ ಟಿ ರವಿ ಹೇಳಿಕೆ ಬಿಜೆಪಿಯವರ ಕೆಟ್ಟ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ವಾಗ್ದಾಳಿ ನಡೆಸಿದರು.
ಎಚ್ ಡಿಕೆ ವಿರುದ್ಧ ಕಿಡಿ : ಬಿಜೆಪಿ ಸರ್ಕಾರದ ಅಕ್ರಮ ಹೊರಹಾಕಲು ಮಾಜಿ ಸಿಎಂ ಕುಮಾರಸ್ವಾಮಿ ಕಾಂಗ್ರೆಸ್ ನಲ್ಲಿ ಸಹಕರಿಸುವಂತೆ ಕೇಳಿದ ವಿಚಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಎಂಬಿಪಿ, ಕುಮಾರಸ್ವಾಮಿ ಯಾವಾಗ ಯಾರಿಗೆ ಸಹಕಾರ ನೀಡುತ್ತಾರೆ ಅನ್ನೋದು ಗೊತ್ತಿಲ್ಲ. ಮೈಸೂರು ಮೇಯರ್ ಚುನಾವಣೆ ಆಯ್ತು. ಅಲ್ಲಿ ಬಿಜೆಪಿಗೆ ಸಾಥ್ ಕೊಟ್ಟರು, ಸಿಂದಗಿ ಉಪ ಚುನಾವಣೆಗಳಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಿ ಕಾಂಗ್ರೆಸ್ ಅನ್ನು ಸೋಲಿಸಿದರು. ಚುನಾವಣೆಯಲ್ಲಿ ಕುಮಾರಸ್ವಾಮಿಯವರಿಗೆ ಸಾಥ್ ಕೊಡುವ ಮುನ್ನ ನಾವು ಬಹಳ ಯೋಚಿಸಬೇಕಾಗುತ್ತದೆ. ಇನ್ನು, ಅವರಿಗೆ ಸಹಕಾರ ನೀಡುವ ಬಗ್ಗೆ ಪಕ್ಷ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದರು.
ಸರ್ಕಾರದ ವಿರುದ್ಧ ವಾಗ್ದಾಳಿ: ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಎಂಬಿಪಿ, ನಮಗೆ ಭವ್ಯ, ವೈಭವದ ಇತಿಹಾಸ ಇದೆ. ಅದು ಮರಳಬೇಕು. ಈ 40% ಸರ್ಕಾರ ತೊಲಗಬೇಕು. ಪಿಎಸ್ಐ ನೇಮಕಾತಿ ಅಕ್ರಮ ಅಷ್ಟೇ ಅಲ್ಲ, ಬೇರೆ ಬೇರೆ ಹಗರಣಗಳು ಸಹ ಹೊರಬರುತ್ತಿವೆ. ಇದರಿಂದ ನಮ್ಮ ರಾಜ್ಯದ ಹೆಸರಿಗೆ ಧಕ್ಕೆ ಉಂಟಾಗಿದೆ ಎಂದರು.
ಬಿಜೆಪಿ ಜನಸ್ಪಂದನೆಗೆ ವ್ಯಂಗ್ಯ: ಬಿಜೆಪಿ ಜನಸ್ಪಂದನ ಕಾರ್ಯಕ್ರಮದ ಬಗ್ಗೆ ವ್ಯಂಗ್ಯವಾಡಿದ ಎಂ ಬಿ ಪಾಟೀಲ್ ಲಕ್ಷಾಂತರ ಜನ ಎಂದು ಖಾಲಿ ಕುರ್ಚಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಮಾತನಾಡುವಾಗ ಖಾಲಿ ಕುರ್ಚಿಗಳನ್ನು ಉದ್ದೇಶಿಸಿ ಮಾತನಾಡಿದರು ಎಂದು ಲೇವಡಿ ಮಾಡಿದರು. ಖಾಲಿ ಕುರ್ಚಿಗಳಿಗೆ ಲಕ್ಷಾಂತರ ಜನ ಎಂದು ಹೇಳಿದ್ದಾರೆ ಎಂದು ಎಂ ಬಿ ಪಾಟೀಲ ಗೇಲಿ ಮಾಡಿದರು.
ಇದನ್ನೂ ಓದಿ : ಉಮೇಶ್ ಕತ್ತಿ ಮನೆಯಲ್ಲಿ ಮಾತನಾಡಿದ ರಾಜಕಾರಣದ ಬಗ್ಗೆ ಬಹಿರಂಗಪಡಿಸಲ್ಲ.. ಸಿದ್ದರಾಮಯ್ಯ