ವಿಜಯಪುರ: ಆದಿಲ್ ಶಾಹಿ ಅರಸರು ಕಟ್ಟಿದ ಐತಿಹಾಸಿಕ ಮಮದಾಪುರ ಸಣ್ಣ ಹಾಗೂ ದೊಡ್ಡ ಕೆರೆಗಳಿಗೆ ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಬಾಗಿನ ಅರ್ಪಿಸಿದರು.
400 ವರ್ಷಗಳ ಹಿಂದೆ ಆದಿಲ್ ಶಾಹಿಗಳು 7 ಗ್ರಾಮಗಳನ್ನು ಸ್ಥಳಾಂತರಗೊಳಿಸಿ, ಆ ಗ್ರಾಮದ ಒಟ್ಟು 1ಸಾವಿರ ಎಕರೆ ಪ್ರದೇಶದಲ್ಲಿ ಎರಡು ಬೃಹತ್ ಕೆರೆಗಳನ್ನು ನಿರ್ಮಿಸಿದ್ದರು. ಇತ್ತೀಚಿನ ದಿನಗಳಲ್ಲಿ ಮಳೆಯ ಅಭಾವದಿಂದ ಕೆರೆಗಳು ಬರಿದಾಗಿ, ತಮ್ಮ ಅಸ್ತಿತ್ವ ಕಳೆದುಕೊಂಡಿದ್ದವು. ಗ್ರಾಮಸ್ಥರು ಇಲ್ಲಿನ ಕೆರೆ ಅಂಗಳದಲ್ಲಿ ಹೊಲಗಳ ಹಾಗೆ ಬಿತ್ತನೆ ಮಾಡುತ್ತಿದ್ದರು. ಎಂ.ಬಿ.ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದಾಗ ಬೇಗಂ ತಲಾಬ್, ಭೂತನಾಳ, ಮಮದಾಪುರ ಸೇರಿದಂತೆ ಸಪ್ತ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪಿಸಿ, ಒಂದೇ ವರ್ಷದಲ್ಲಿ ಕಾರ್ಯಗತಗೊಳಿಸಿ, ನೀರು ತುಂಬಿಸಿದ್ದರು. ಬಳಿಕ ಅಂದಿನಿಂದ ಕೆರೆ ಮರುಜೀವ ಪಡೆದುಕೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಂ.ಬಿ.ಪಾಟೀಲ, ಆದಿಲ್ ಶಾಹಿಗಳು ಕೊಂಕಣ ಪ್ರದೇಶಕ್ಕೆ ಹೋದಾಗ ಅಲ್ಲಿನ ಸೃಷ್ಠಿಯ ಸೊಬಗನ್ನು ಸವಿದು, ನಮ್ಮಲ್ಲಿ ಈ ರೀತಿ ಪರಿಸರ ಏಕಾಗಬಾರದು ಎಂದು ಚಿಂತನೆ ಮಾಡಿ, ತನ್ನ ಮಂತ್ರಿ ಖವಾಸ್ಕ್ ಖಾನ್ ಮೂಲಕ ಉತ್ತಮ ಸ್ಥಳ ಗುರುತಿಸಿ, ಬೃಹತ್ ಕೆರೆಗಳನ್ನು ನಿರ್ಮಿಸಿ ಆ ಕೆರೆಯಿಂದ ಸುತ್ತಲಿನ ಪ್ರದೇಶದಲ್ಲಿ ಸಮೃದ್ಧವಾಗಿ ಭತ್ತ ಬೆಳೆಯುಲು ಆದೇಶಿಸಿದ್ದರು. ಆಗ ಕೊಂಕಣಕ್ಕೆ ಹೋಗುವ ಅಗತ್ಯವೇ ಇಲ್ಲ, ಇಲ್ಲಿಯೇ ಕೊಂಕಣ ಪ್ರದೇಶವಾಗುತ್ತದೆ ಎಂದಿದ್ದರು. ಮಂತ್ರಿ ಖವಾಸ್ಕ್ ಖಾನ್ 7 ಹಳ್ಳಿಗಳನ್ನು ಸ್ಥಳಾಂತರಗೊಳಿಸಿ ಎತ್ತರ ಪ್ರದೇಶದಲ್ಲಿ ತಮ್ಮ ರಾಜ ಮೊಹಮ್ಮದ ಆದಿಲ್ ಶಾಹಿ ಅವರ ನೆನಪಿನಲ್ಲಿ ಮೊಹಮ್ಮದಪುರ (ಮಮದಾಪುರ) ದಲ್ಲಿ ಗ್ರಾಮಸ್ಥರನ್ನು ನೆಲೆಗೊಳಿಸಿದರು. ನೂರಾರು ವರ್ಷ ನೀರಿಲ್ಲದೇ ತನ್ನ ಸೌಂದರ್ಯ ಕಳೆದುಕೊಂಡಿದ್ದ ಈ ಕೆರೆಗಳು ಇದೀಗ 3-4ವರ್ಷಗಳಿಂದ ತುಂಬುತ್ತಾ, ತಮ್ಮ ಗತವೈಭವ ಮರಳಿ ಪಡೆದಿವೆ. ನಾನು ಸಚಿವನಾಗಿ ಮಾಡಿದ ಕಾರ್ಯಗಳಲ್ಲಿ ನನಗೆ ಸಂತಸ ತಂದ ಯೋಜನೆಗಳಲ್ಲಿ ಇದು ಒಂದಾಗಿದೆ ಎಂದರು.
ಮಮದಾಪುರ ವಿರಕ್ತ ಮಠದ ಅಭಿನವ ಮುರುಗೇಂದ್ರ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿ.ಪಂ.ಮಾಜಿ ಅಧ್ಯಕ್ಷ ಬಸವರಾಜ ದೇಸಾಯಿ ದಂಪತಿಗಳು, ಕೆ.ಪಿ.ಸಿ.ಸಿ ಕಾರ್ಯದರ್ಶಿ ಸಂಗಮೇಶ ಬಬಲೇಶ್ವರ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೃಷ್ಣಾ ಕುಲಕರ್ಣಿ, ಮುಖಂಡರಾದ ಲಕ್ಷ್ಮಣ ತೇಲಿ, ಶಂಕರ ಸಿದರೆಡ್ಡಿ, ಅಪ್ಪುಗೌಡ ಪಾಟೀಲ್ ಶೇಗುಣಶಿ, ವಿ.ವಿ.ಅರಕೇರಿ, ಬಸನಗೌಡ ಪಾಟೀಲ್, ಚಂದ್ರು ನಾಟೀಕಾರ ಸೇರಿದಂತೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.