ವಿಜಯಪುರ: ಮೈಸೂರಿನಲ್ಲಿ ಸಾವರ್ಕರ್ ರಥಯಾತ್ರೆಗೆ ಮಾಜಿ ಸಿಎಂ ಯಡಿಯೂರಪ್ಪ ಚಾಲನೆ ನೀಡಿರುವುದು ಎಷ್ಟು ಸರಿ. ಅದರ ಬದಲಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಕನ್ನಡ ನಾಡಿನ ಹೋರಾಟಗಾರರ ಭಾವಚಿತ್ರದ ಮೆರವಣಿಗೆ ಮಾಡಲಿ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಒತ್ತಾಯಿಸಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ವೀರ ರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಹಲಗಲಿಯ ಬೇಡರು, ಸುರಪುರ ನಾಯಕರ ಫೋಟೋ ಮೆರವಣಿಗೆ ಮಾಡಲು ಒತ್ತಾಯಿಸಿದರು. ನಮ್ಮ ನಾಡಿದ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಮೆರವಣಿಗೆ ಮಾಡಿದ್ರೆ, ನಾವೂ ಅದರಲ್ಲಿ ಭಾಗಿಯಾಗುತ್ತೇವೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಮುಖಂಡರ ಜೊತೆಗೆ ಚರ್ಚೆ ಮಾಡಿ ನಮ್ಮ ನಾಡಿನ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಕೆಲಸ ಮಾಡುತ್ತೇವೆ ಎಂದರು.
ಬಿಜೆಪಿಗೆ ಕನ್ನಡದ ಹೋರಾಟಗಾರರು ಬೇಡ್ವಾ ಎಂದು ಸರ್ಕಾರ ವಿರುದ್ಧ ಕಿಡಿಕಾರಿದರು. ನಮ್ಮ ನಾಡಿನ ಹೋರಾಟಗಾರರ ಫೋಟೋ ತೆಗೆದುಕೊಂಡು ರಥ ಯಾತ್ರೆ ಮಾಡಿ. ಇಂತಹ ವಿವಾದಾತ್ಮಕ ವ್ಯಕ್ತಿಯೇ ಬೇಕಾ? ವಿವಾದಾತ್ಮಕ ವ್ಯಕ್ತಿಯ ಫೋಟೋ ಇಟ್ಟುಕೊಂಡು ರಥಯಾತ್ರೆ ಮಾಡೋದು ಬಿ ಎಸ್ ಯಡಿಯೂರಪ್ಪ ಅವರಿಗೆ ಶೋಭೆ ತರಲ್ಲ. ಸಾವರ್ಕರ್ ಫೋಟೋ ತೆಗೆದು ನಾಡಿನ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಇಟ್ಟು ಮೆರವಣಿಗೆ ಮಾಡಬೇಕೆಂದು ಎಂ ಬಿ ಪಾಟೀಲ್ ಆಗ್ರಹಿಸಿದರು.
ಇದನ್ನೂ ಓದಿ: ಬಿಎಸ್ವೈಗೆ 2 ಬಾರಿಯೂ ಪೂರ್ಣ ಅಧಿಕಾರ ಕೊಟ್ಟಿಲ್ಲ, ಲಿಂಗಾಯತರ ಮತಗಳು ಈ ಬಾರಿ ಕಾಂಗ್ರೆಸ್ಗೆ ಬರಲಿವೆ: ಎಂ ಬಿ ಪಾಟೀಲ್