ವಿಜಯಪುರ:ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನು ಪತಿಯೇ ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊಲವಲಯದ ತೊರವಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಸಂತೋಷ ಈಟಿ(32)ಪತ್ನಿ ಶ್ರೀದೇವಿ ಈಟಿ(28) ಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮದುವೆಯಾದ ಸಂದರ್ಭದಲ್ಲಿ ಚೆನ್ನಾಗಿಯೇ ಇದ್ದ ಸಂತೋಷ ಬರಬರುತ್ತಾ ಹೆಂಡತಿಯ ನಡತೆ ಶಂಕಿಸಿ ಮನೆಯಲ್ಲಿ ಗಲಾಟೆ ಮಾಡಲು ಆರಂಭಿಸಿದ. ಮೂರು ಮಕ್ಕಳಾದರೂ ಹೆಂಡತಿಯ ಮೇಲೆ ಸಂಶಯ ಪಡುತ್ತಿದ್ದ. ಮೃತ ಶ್ರೀದೇವಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಫಾಯಿ ಕರ್ಮಚಾರಿಯಾಗಿ ಆಗಿ ಕೆಲಸ ನಿರ್ವಹಿಸುತ್ತಿದ್ದಳು. ಸಂತೋಷ ಕೂಡಾ ಕೂಲಿ ಕೆಲಸ ಮಾಡಿಕೊಂಡಿದ್ದ. ಆದರೆ ಈತನಿಗೆ ಹೆಂಡತಿಯ ಮೇಲೆ ಎಷ್ಟು ಸಂಶಯ ಎಂದರೆ ಹೆಂಡತಿ ಕೆಲಸ ಮಾಡುವ ಆಸ್ಪತ್ರೆಯ ಬಳಿ ಹೋಗಿ ಅವಳಿಗೆ ಗೊತ್ತಿಲ್ಲದಂತೆ ನಿಲ್ಲುತ್ತಿದ್ದನಂತೆ. ಅಷ್ಟೇ ಅಲ್ಲದೇ ಪ್ರತಿ ದಿನ ಮನೆಯಲ್ಲಿ ಕುಡಿದು ಬಂದು ಗಲಾಟೆ ಮಾಡುತ್ತಿದ್ದನಂತೆ. ಈತನ ಕಿರಿಕಿರಿಗೆ ಬೇಸತ್ತ ಹೆಂಡತಿ ತೊರವಿ ಗ್ರಾಮದಲ್ಲಿರುವ ತನ್ನ ತವರು ಮನೆಗೂ ಹೋಗಿದ್ದಳು.
ಹಿರಿಯರು ರಾಜಿ ಪಂಚಾಯಿತಿ ಮಾಡಿ ಸಮಸ್ಯೆ ಬಗೆಹರಿಸಿದ್ದಾರೆ. ಶ್ರೀದೇವಿ ತಾಯಿಯ ತವರು ಮನೆಯಾದ ತೊರವಿ ಗ್ರಾಮದಲ್ಲೇ ಇವರು ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಕಳೆದ ಮೂರು ದಿನಗಳ ಹಿಂದೆ ಮೂವರು ಮಕ್ಕಳನ್ನು ಅಜ್ಜಿಯ ಮನೆಗೆ ಕಳುಹಿಸಿ ಪತ್ನಿಯನ್ನು ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ.
ಇಂದು ಬೆಳಿಗ್ಗೆ ಮೃತ ಶ್ರೀದೇವಿಯ ಸಹೋದರಿ ರೋಹಿಣಿ ತನ್ನ ಅಕ್ಕನಿಗೆ ಕರೆ ಮಾಡಿದಾಗ ಆಗ ಫೋನ್ ರಿಸೀವ್ ಆಗದೇ ಹೋಗಿದ್ದರಿಂದ ಮನೆಗೆ ಹೋಗಿ ನೋಡಿದ್ದಾರೆ. ಬಾಗಿಲು ಬಡಿದರೂ ಬಾಗಿಲು ತೆರೆಯದೇ ಇದ್ದಾಗ ಬಾಗಿಲು ಮುರಿದು ನೋಡಿದರೆ ಈತ ಕೊಲೆ ಮಾಡಿ ನೇಣಿಗೆ ಶರಣಾಗಿರುವದು ಬೆಳಕಿಗೆ ಬಂದಿದೆ.ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಅನುಮಾನದ ಹುತ್ತಕ್ಕೆ ತಂದೆ-ತಾಯಿ ಇಬ್ಬರೂ ಬಲಿಯಾಗಿದ್ದು, ಹೆತ್ತವರ ಪ್ರೀತಿ ಇಲ್ಲದೇ ಮೂರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.
ಇದನ್ನೂ ಓದಿ:ಅವಾಚ್ಯ ಶಬ್ದಗಳಿಂದ ನಿಂದನೆ: ಪ್ರಶ್ನಿಸಿದ ಮಹಿಳಾ ಪೊಲೀಸ್ ಮೇಲೆ ಲಾಯರ್ ಮಗನಿಂದ ಹಲ್ಲೆ