ವಿಜಯಪುರ: ಭ್ರಷ್ಟಾಚಾರ ಆರೋಪದಡಿ ಜಿಲ್ಲೆಯಲ್ಲಿ ಕೆಲ ಅಧಿಕಾರಿಗಳ ನಿವಾಸದ ಮೇಲೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳ ನಿವಾಸಗಳು ಸೇರಿದಂತೆ ಒಟ್ಟು ನಾಲ್ಕು ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು, ಅಧಿಕಾರಿಗಳ ಕುರಿತು ತನಿಖೆ ಕೈಗೊಂಡಿದ್ದಾರೆ. ಬಸವನ ಬಾಗೇವಾಡಿ ಲೋಕೋಪಯೋಗಿ ಇಲಾಖೆ ಪ್ರಭಾರಿ ಎಇಇ ಭೀಮನಗೌಡ ಬಿರಾದಾರ ನಿವಾಸದ ಮೇಲೆ ದಾಳಿ ನಡೆದಿದೆ.
ವಿಜಯಪುರ ನಗರದ ಆರ್ಟಿಓ ಕಚೇರಿ ಹಿಂಬದಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ. ಇವರ ಸಂಬಂಧಿ ಶ್ರೀಕಾಂತ ಅಂಗಡಿ ಅವರ ನಿವಾಸದ ಮೇಲೂ ದಾಳಿ ನಡೆಸಲಾಗಿದ್ದು, ತನಿಖೆ ಮುಂದುವರೆದಿದೆ.
ಮತ್ತೋಂದೆಡೆ ಮುದ್ದೇಬಿಹಾಳ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಜೆ.ಪಿ. ಶೆಟ್ಟಿ ಅವರ ನಿವಾಸದ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೆ.ಪಿ ಶೆಟ್ಟಿ ಅವರಿಗೆ ಸೇರಿದ ಮುದ್ದೇಬಿಹಾಳ ಪಟ್ಟಣದಲ್ಲಿರುವ ಮನೆ ಹಾಗೂ ತಾಳಿಕೋಟೆ ತಾಲೂಕಿನ ಸಾಸನೂರ ಗ್ರಾಮದಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ತನಿಖೆ ಕೈಗೊಂಡಿದ್ದಾರೆ. ವಿಜಯಪುರ ಲೋಕಾಯುಕ್ತ ಎಸ್ಪಿ ಅನಿತಾ ಹದ್ದನ್ನವರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ. ಒಟ್ಟು ನಾಲ್ಕು ಕಡೆಗಳಲ್ಲಿ ನಡೆದಿರುವ ಈ ದಾಳಿಯಲ್ಲಿ ಮೂರು ಜನ ಡಿವೈಎಸ್ಪಿ, ಏಳು ಜನ ಇನ್ಸ್ಪೆಕ್ಟರ್ಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದಾರೆ.
ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ನಕ್ಷತ್ರ ಆಮೆ ಪತ್ತೆ..
ಇನ್ನೊಂದೆಡೆ ರಾಯಚೂರು ಜಿಲ್ಲೆ ನಗರ ಮತ್ತು ಗ್ರಾಮೀಣ ಯೋಜನಾ ಘಟಕದ ಸಹಾಯಕ ನಿರ್ದೇಶಕರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಶರಣಪ್ಪ ಮಡಿವಾಳ, ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದ ಕಚೇರಿ ಮತ್ತು ಮನೆಯ ಮೇಲೆ ದಾಳಿ ಮಾಡಲಾಗಿದೆ. ಕಲಬುರಗಿಯ ನಾಗನಹಳ್ಳಿ ಖಣದಾಳ ರಸ್ತೆಯಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದೆ. ಆದಾಯ ಮೀರಿ ಆಸ್ತಿಗಳಿಕೆ ಆರೋಪದಡಿ ಕಲಬುರಗಿ ಲೋಕಾಯುಕ್ತ ಎಸ್ಪಿ ಎ.ಆರ್.ಕರ್ನೂಲ್ ನೇತೃತ್ವದಲ್ಲಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.
ಬಾಗಲಕೋಟೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಲಕ್ಷಾಂತರ ರೂಪಾಯಿ ನಗದು ಹಾಗೂ ಎರಡು ನಕ್ಷತ್ರ ಆಮೆ ಪತ್ತೆಯಾಗಿವೆ. ಮನೆಯಲ್ಲಿ ಹಲವು ದಿನಗಳಿಂದ ಆಮೆ ಸಾಕಿದ್ದರು ಎನ್ನಲಾಗಿದೆ. ಅರಣ್ಯ ಕಾಯ್ದೆ ಅಡಿ ಪ್ರಾಣಿಗಳು ಸಾಕುವುದು ನಿಷೇಧ ಇದ್ದರೂ ಸಹ, ಸರ್ಕಾರಿ ಅಧಿಕಾರಿಯಾಗಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಇದನ್ನೂ ಓದಿ: ಲೋಕಾಯುಕ್ತ ದಾಳಿ ವೇಳೆ ನಕ್ಷತ್ರ ಆಮೆ ಪತ್ತೆ..