ವಿಜಯಪುರ: ಜಿಲ್ಲೆಯಲ್ಲಿ ಈ ಹಿಂದೆ ಬೆಳದಿದ್ದ ದ್ರಾಕ್ಷಿ ಬೆಳೆಯನ್ನು ಮಾರುಕಟ್ಟೆಯ ವ್ಯವಸ್ಥೆಯಾಗದೇ ರೈತರು ನಷ್ಟ ಅನುಭವಿಸಿದ್ದು. ಇದೀಗ ನಿಂಬೆಹಣ್ಣು ಬೆಳೆದ ರೈತರ ಸರದಿಯಾಗಿದೆ.
ಜಿಲ್ಲೆಯಲ್ಲಿ ದ್ರಾಕ್ಷಿ ಬಿಟ್ಟರೆ ನಿಂಬೆಹಣ್ಣನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇದೀಗ ನಿಂಬೆಹಣ್ಣು ವ್ಯಾಪಾರ ಈಗ ಸಂಪೂರ್ಣ ಕುಸಿದಿದೆ. ಕೊರೊನಾ ವೈರಸ್ ಭೀತಿಯಿಂದ ನಿಂಬೆಹಣ್ಣಿನ ವ್ಯಾಪಾರ ಸಂಪೂರ್ಣ ನೆಲಕಚ್ಚಿದೆ. ಸತತ ಬರದ ದವಡೆಗೆ ಸಿಲುಕಿರುವ ಬರದ ನಾಡಿನಲ್ಲಿ ಭರಪೂರ ನಿಂಬೆ ಬೆಳೆಯಲಾಗಿದ್ದು, ಇದೀಗ ಬೆಳೆದ ಬೆಳೆಗೆ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ.
ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಧಾರಣೆ ಸುಧಾರಿಸಿದ್ದು, ಇದೀಗ ನೆಲ ಕಚ್ಚಿದೆ. ಕಳೆದ ಮಾರ್ಚ್‌ನಲ್ಲಿ ಪ್ರತಿ 1000 (ಒಂದು ಡಾಗ್)ಗೆ 400 ರಿಂದ 1100 ರೂ. ವರೆಗೆ ಇದ್ದ ಧಾರಣೆ ನಂತರ ಏಪ್ರಿಲ್‌ನಲ್ಲಿ ತೀವ್ರ ಕುಸಿತ ಕಂಡಿದೆ. ಪ್ರಸ್ತುತ ಒಂದು ಡಾಗ್ (ಸಾವಿರ ನಿಂಬೆ)ಗೆ 150 ರೂ. ನಿಂದ 200 ರೂ. ದರ ಸಿಗುತ್ತಿದೆ. ಗರಿಷ್ಠ ಎಂದರೆ 500 ರೂ. ಸಿಗುತ್ತಿದೆ.
ಜಿಲ್ಲೆಯ ತಿಕೋಟಾ, ಹೊರ್ತಿ, ಕಗ್ಗೂಡ ಗ್ರಾಮದ ರೈತರು ಉತ್ತಮ ಬೆಲೆ ಸಿಗದೆ ರಸ್ತೆ ಮೇಲೆ ನಿಂಬೆ ಸುರಿದು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ಪ್ರತಿಬಾರಿ ಬೇಸಿಗೆಗೆ ಹೆಚ್ಚಿನ ಬೇಡಿಕೆ ಇರುತ್ತಿದ್ದ ನಿಂಬೆ ಈ ಬಾರಿ ಗಿಡದಲ್ಲೆ ಉಳಿದುಕೊಂಡಿದೆ. ಕರೊನಾ ಕಂಟಕದಿಂದಾಗಿ ಜಿಲ್ಲೆಯಲ್ಲಿ ಲಾಕ್‌ಡೌನ್ ಫೋಷಣೆ ಮಾಡಿದ್ದು, ಅದರಿಂದಾಗಿ ವಾಹನಗಳು ಸಂಚರಿಸದೇ ಇರುವುದು. ಕೂಲಿಯಾಳುಗಳು ಸಿಗದೇ, ನಿಂಬೆ ಕಟಾವು ಮಾಡಲಾಗದೆ ಇರುವುದರಿಂದ ಗಿಡದಲ್ಲೇ ಕೊಳೆಯುತ್ತಿದೆ.