ವಿಜಯಪುರ: ಕೊರೊನಾ ಸಾಮಾಜಿಕ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಊಟಕ್ಕೂ ಗತಿಯಿಲ್ಲದೆ ಬುಡಕಟ್ಟು ಜನಾಂಗದ ಅನೇಕ ಮಂದಿ ಭಿಕ್ಷೆ ಬೇಡುವ ಹಂತ ತಲುಪಿದ್ದಾರೆ.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿಯಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿರುವ ಬುಡಕಟ್ಟು ಜನಾಂಗದ ಜನರು ಬದುಕು ನಡೆಸಲು ಗಿಳಿ ಶಾಸ್ತ್ರ ಹಾಗೂ ಕಿವಿಯೋಲೆಗಳನ್ನು ಮಾರಿದ್ದಾರೆ. ಇವರೆಲ್ಲರೂ ಊರೂರು ತಿರುಗಿ ವ್ಯಾಪಾರ ನಡೆಸುತ್ತಿದ್ದರು. ಆದರೀಗ ತುತ್ತು ಅನ್ನಕ್ಕಾಗಿಯೂ ಬೇರೆಯವರ ಬಳಿ ಕೈ ಚಾಚುತ್ತಿದ್ದಾರೆ.
ಸರ್ಕಾರದಿಂದ ನಮಗೆ ಯಾವುದೇ ಸಹಾಯ ಸಿಗುತ್ತಿಲ್ಲ. ಊಟಕ್ಕೂ ತತ್ವಾರವಾಗಿದೆ ಎಂದು ಅಸಹಾಯಕ ಜನರು ಅಳಲು ತೋಡಿಕೊಂಡರು.
ನಿಡಗುಂದಿಗೆ ಹೋಗಿ ಪಡಿತರ ತರಬೇಕು ಎಂದರೂ ಸಾಧ್ಯವಾಗುತ್ತಿಲ್ಲ. ಎಲ್ಲೆಡೆ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಪೊಲೀಸರು ಹೊರ ಹೋಗಲು ಬಿಡುತ್ತಿಲ್ಲ. ನಮ್ಮ ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.