ವಿಜಯಪುರ: ಫೆಬ್ರವರಿ 2 ರಂದು ಕೆಎಸ್‌ಆರ್‌ಟಿಸಿ ಪರೀಕ್ಷೆ ನಡೆಯುತ್ತಿದ್ದು, ಪೂರ್ವ ಸಿದ್ದತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಸಭಾ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಗರದ 10 ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನ ಸ್ಥಾಪಿಸಲಾಗಿದೆ. ಫೆಬ್ರವರಿ 2ರಂದು ತಾಂತ್ರಿಕ ಸಹಾಯ ಹಾಗೂ ಭದ್ರತಾ ರಕ್ಷಕ ದರ್ಜೆ ಹುದ್ದೆಗಳಿಗೆ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಗಳು ನಡೆಯುತ್ತಿದ್ದು, ಪ್ರತಿ ಇಪ್ಪತ್ತು ಅಭ್ಯರ್ಥಿಗಳಿಗೆ ಒಬ್ಬರು ಕೊಠಡಿ ಮೇಲ್ವಿಚಾರಕನ್ನು ನೇಮಿಸಲಾಗಿದೆ. ಅಧಿಕಾರಿಗಳು, ಡಿಡಿಪಿಯು ಅವರು ನೀಡುವ ಸೂಚನೆಗಳನ್ನು ತಪ್ಪದೇ ಪಾಲಿಸಬೇಕು ಹಾಗೂ ಅಭ್ಯರ್ಥಿಗಳು ಪರೀಕ್ಷೆ ನಕಲು ನಡೆಯದಂತೆ ನಿಗಾ ವಹಿಸಬೇಕು ಎಂದು ಸೂಚಿಸಿದರು.
ಅಲ್ಲದೇ, ಪ್ರತಿ ಕೇಂದ್ರಕ್ಕೆ ಇಬ್ಬರು ಜಾಗೃತ ದಳ ಸದಸ್ಯರಾಗಿ ಹಿರಿಯ ಉಪನ್ಯಾಸಕರನ್ನು ನೇಮಿಸಬೇಕು. ವಿಜ್ಞಾನ ವಿಷಯ ಉಪನ್ಯಾಸಕರನ್ನು ಹೊರತುಪಡಿಸಿ, ಮೇಲ್ವಿಚಾರಕನ್ನು ನೇಮಿಸಬೇಕು. ಪರೀಕ್ಷೆ ಪ್ರಾರಂಭವಾದ ನಂತರ ಎಲ್ಲಾ ಕೊಠಡಿಗಳ ಹಾಜರಾದ ಹಾಗೂ ಗೈರಾದ ಅಭ್ಯರ್ಥಿಗಳ ವಿವರ ಪಡೆದು,ಆನ್‌ಲೈನ್ ಮೂಲಕ ದಾಖಲಿಸುವಂತೆ ಕ್ರಮ ಕೈಗೊಳ್ಳುವಂತೆ ಡಿಡಿಪಿಯು ಜೆ.ಎಎಸ್.ಪೂಜಾರಿಗೆ ತಿಳಿಸಿದರು.
ಬಳಿಕ ಮಾತನಾಡಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜೆ.ಎಸ್.ಪೂಜಾರಿ, ಪರೀಕ್ಷಾ ಕೇಂದ್ರಗಳಿಗೆ ಬೇಕಾದ ಅಗತ್ಯ ಕ್ರಮಗಳ ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನೂ ಪರೀಕ್ಷಾ ಕೇಂದ್ರಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನ್ಯಾಸಕರ ನೇಮಕ ಮಾಡಲಾಗಿದೆ. ಪ್ರಾಚಾರ್ಯರನ್ನ ಪ್ರಶ್ನೆ ಪತ್ರಿಕೆಯ ಪಾಲಕರಾಗಿ ನೇಮಕ ಮಾಡಲಾಗಿದೆ ಎಂದರು.