ಮುದ್ದೇಬಿಹಾಳ(ವಿಜಯಪುರ) : ತಾಲೂಕಿನ ಢವಳಗಿ ಗ್ರಾಮದ ಹೊರವಲಯದಲ್ಲಿರುವ ಕಸ್ತೂರಬಾ ಗಾಂಧಿ ಬಾಲಕಿಯರ ವಸತಿ ನಿಲಯದ 100 ವಿದ್ಯಾರ್ಥಿನಿಯರ ಪೈಕಿ 11 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಆದರೆ ಈ ವಿದ್ಯಾರ್ಥಿನಿಯರಿಗೆ ರೋಗದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.
ನೆಗಡಿ, ಕೆಮ್ಮು, ಜ್ವರ ಇರುವ ವಿದ್ಯಾರ್ಥಿನಿಯರ ಆರ್ಟಿಪಿಸಿಆರ್ ತಪಾಸಣೆಯಲ್ಲಿ ಪಾಸಿಟಿವ್ ಬಂದಿಲ್ಲ. ಇವರಿಗೆ ಆರೋಗ್ಯ ಇಲಾಖೆಯಿಂದ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಹಾಸ್ಟೆಲಿನ ಒಂದು ಭಾಗದಲ್ಲಿ 80, ಇನ್ನೊಂದು ಭಾಗದಲ್ಲಿ 20 ವಿದ್ಯಾರ್ಥಿನಿಯರು ವಾಸವಿದ್ದಾರೆ.
ಇವರಲ್ಲಿ 20 ವಿದ್ಯಾರ್ಥಿನಿಯರು ವಾಸವಿರುವ ಭಾಗದಲ್ಲಿ ಯಾವುದೇ ತೊಂದರೆ ಕಾಣಿಸಿಕೊಂಡಿಲ್ಲ. 80 ವಿದ್ಯಾರ್ಥಿನಿಯರು ವಾಸವಿರುವೆಡೆ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿವೆ. ಪಾಸಿಟಿವ್ ಕಂಡುಬಂದ ವಿದ್ಯಾರ್ಥಿನಿಯರನ್ನು ಇತರೆ ವಿದ್ಯಾರ್ಥಿಗಳಿಂದ ಪ್ರತ್ಯೇಕಿಸಿದ್ದು, ಅವರನ್ನು ಮನೆಗಳಿಗೆ ಕಳಿಸಿ ಹೋಮ್ ಐಸೋಲೇಷನ್ಗೆ ಕ್ರಮ ಕೈಕೊಳ್ಳಲು ಸಿದ್ಧತೆ ನಡೆದಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ.ಸತೀಶ ತಿವಾರಿ ಅವರು ವಸತಿನಿಲಯಕ್ಕೆ ಭೇಟಿ ನೀಡಿ ಚಿಕಿತ್ಸೆ ಮತ್ತು ಮುಂಜಾಗರೂಕತೆಗೆ ಕ್ರಮ ಕೈಕೊಂಡಿದ್ದಾರೆ. ವಿದ್ಯಾರ್ಥಿನಿಯರಿಗೆ ಬಿಸಿಯಾದ ಆಹಾರ, ಬಿಸಿ ನೀರು ಸೇರಿ ಹಲವು ಆರೋಗ್ಯಕ್ಕೆ ಪೂರಕ ಸೌಲಭ್ಯ ಒದಗಿಸಲು ಹಾಸ್ಟೆಲ್ ಮೇಲ್ವಿಚಾರಕರಿಗೆ ಸೂಚಿಸಲಾಗಿದೆ. ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಸ್ಥಳದಲ್ಲಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ.