ವಿಜಯಪುರ: ಲಾಕ್ಡೌನ್ ಹಿನ್ನೆಲೆ ಕೆಲ ಜನರು ತುತ್ತು ಅನ್ನಕ್ಕಾಗಿ ಪರಿತಪಿಸುವಂತಾಗಿದೆ. ಇನ್ನು ಮೂಕ ಪ್ರಾಣಿಗಳ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದೆ. ಇಂತಹ ಸಂದರ್ಭದಲ್ಲಿ ಅವಕ್ಕೆ ಆಹಾರ ನೀಡುವ ಕೆಲಸವನ್ನು ಜಿಲ್ಲೆಯ ಜೈನ ಸಮಾಜದ ಯುವಕರು ಮಾಡುತ್ತಿದ್ದು, ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಜಿಲ್ಲೆಯ ಮಠಪತಿ ಗಲ್ಲಿಯಲ್ಲಿರುವ ಜೈನ ಸಮುದಾಯದ ಸುಮಾರು 24 ಯುವಕರ ತಂಡ ಹಣ ಸಂಗ್ರಹಿಸಿ ಬೀದಿ ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿರುವ ಹಸು, ನಾಯಿಗಳು ಸೇರಿದಂತೆ ವಿವಿಧ ಪ್ರಾಣಿ-ಪಕ್ಷಿಗಳಿಗೆ ಕಲ್ಲಂಗಡಿ, ಹಸಿ ಮೇವು, ಚಪಾತಿ, ಸೌತೆಕಾಯಿ, ಗೆಜ್ಜರಿ ಹಾಗೂ ಇತರೆ ತರಕಾರಿಗಳನ್ನು ನೀಡುತ್ತಿದ್ದಾರೆ. ಹಣ್ಣು, ತರಕಾರಿಗಳನ್ನು ವಾಹನದಲ್ಲಿ ತುಂಬಿಕೊಂಡು ಹಂಚುವ ಕೆಲಸ ಮಾಡುತ್ತಿದ್ದಾರೆ. 40-50 ಜನರನ್ನು ಒಳಗೊಂಡ ಗೋಸೇವಾ ಸಮಿತಿ ರಚಿಸಿಕೊಂಡು ನಿತ್ಯವೂ ನಗರದ ವಿವಿಧ ಗಲ್ಲಿಗಳಿಗೆ ತೆರಳಿ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.
ಪ್ರಾಣಿಗಳಲ್ಲದೇ ಪಕ್ಷಿಗಳಿಗೂ ಸಹ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ. ಕೆಲ ಗೋಶಾಲೆಗಳು ಆಹಾರ ನೀಡುವಂತೆ ಬೇಡಿಕೆ ಸಲ್ಲಿಸಿದ್ದು, ಅವರ ಮನವಿಗೂ ಜೈನ ಸಮುದಾಯದ ಯುವಕರು ಸ್ಪಂದಿಸಲು ಮುಂದಾಗಿದ್ದಾರೆ.