ವಿಜಯಪುರ: ಸರ್ಕಾರಕ್ಕೆ ಔರಾದಕರ್ ವರದಿ ಜಾರಿಗಾಗಿ ಸಾಕಷ್ಟು ಒತ್ತಡ ಹಾಕ್ತಿದ್ದೇವೆ, ಬಸವರಾಜ ಬೊಮ್ಮಾಯಿ ಅವರಿಗೆ ಕಾನೂನಿನ ತಿಳುವಳಿಕೆಯಿಲ್ಲ ಎಂದು ಪೊಲೀಸ್ ಮಹಾಸಂಘದ ರಾಜ್ಯಾಧ್ಯಕ್ಷ ವಿ.ಶಶಿಧರ ವಾಗ್ದಾಳಿ ನಡೆಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ವಿರುದ್ಧ ಎರಡು ಕೇಸ್ಗಳನ್ನು ದಾಖಲಿಸಲಾಗಿತ್ತು, ಈಗ ಒಂದು ಕೇಸ್ ಹಳ್ಳ ಹಿಡಿದಿದೆ. 2016 ರಲ್ಲಿ 86 ದಿನಗಳ ಕಾಲ ಜೈಲುವಾಸ ಅನುಭವಿಸಿ ಬಂದಿದ್ದೆ, ಈಗ ಆ ಪ್ರಕರಣ ಖುಲಾಸೆ ಆಗಿದೆ.
ಇವತ್ತು ಪೊಲೀಸ್ ಸಂಘಟನೆಯಿಂದ ಹೋರಾಟ ಮಾಡಬೇಕು ಎಂದರೆ ಅನುಮತಿ ಕೊಡುತ್ತಿಲ್ಲ, ನನಗೆ ಎಲ್ಲದಕ್ಕಿಂತ ಸಂಘಟನೆ ಮುಖ್ಯ. ಹತ್ತು ಜನ, ನೂರು ಜನದ ಜೊತೆ ಹೋರಾಟ ನಡೆಸಿದರೆ ಸರ್ಕಾರವನ್ನು ಬಗ್ಗು ಬಡಿಯಲು ಸಾಧ್ಯವಿಲ್ಲ, ಸುಮಾರು ಎರಡರಿಂದ ಮೂರು ಲಕ್ಷ ಜನರನ್ನು ಸೇರಿಸುವ ಪ್ರಯತ್ನ ನಡೆಯುತ್ತಿದೆ. ನಾನು ಸುಮ್ಮನೆ ಪತ್ರಿಕಾ ಹೇಳಿಕೆ ಕೋಡುವುದು, ಖಂಡನೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಹೇಳಿದರು.
ಸರ್ಕಾರಕ್ಕೆ ಔರಾದಕರ್ ವರದಿ ಜಾರಿಗಾಗಿ ಸಾಕಷ್ಟು ಒತ್ತಡ ಹಾಕಿದ್ದೇವೆ, ಬಸವರಾಜ ಬೊಮ್ಮಾಯಿ ಅವರಿಗೆ ಕಾನೂನಿನ ತಿಳುವಳಿಕೆ ಇಲ್ಲ, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಹೇಳಿದ ಹಾಗೇ ಅವರು ಕೇಳುತ್ತಾರೆ. ಇವರಿಗೆ ಕಾನೂನು ಏನು ಎತ್ತ ಎಂಬುದು ಗೊತ್ತಿಲ್ಲ, ಐಎಎಸ್ ಅಧಿಕಾರಿಗಳು ಫೈಲ್ ತಂದು ಇಡುತ್ತಾರೆ, ಇವರು ಸಹಿ ಮಾಡಿ ಕಳುಹಿಸುತ್ತಾರೆ, ನಮ್ಮ ದುರಂತ, ಜನಾಡಳಿತವನ್ನು ಇಂತವರ ಕೈಗೆ ಕೊಟ್ಟು ನಲುಗಿ ಹೋಗ್ತಿದ್ದೇವೆ ಎಂದು ಹೇಳಿದರು.
ಒಂದೊಂದು ವಿಧಾನಸಭೆ ಕ್ಷೇತ್ರದಲ್ಲಿ ಗೆಲ್ಲಬೇಕು ಅಂದರೆ ಕೋಟ್ಯಂತರ ರೂಪಾಯಿ ಹಣ ಬೇಕು, ಚುನಾವಣಾ ವ್ಯವಸ್ಥೆ, ಜನತಂತ್ರ, ಅಧಿಕಾರ ಶಾಹಿ ಇವೆಲ್ಲಾ ಧಂದೆಗಳಾಗಿವೆ, ನಾವು ನೀವು ಕೊಟ್ಟ ತೆರಿಗೆಯನ್ನು ಯಾವುದಕ್ಕೋ ಬಳಸಿಕೊಳ್ಳುತ್ತಾರೆ ಎಂದು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಅಲೋಕ್ ಕುಮಾರ್ ವಿರುದ್ಧ ಆಕ್ರೋಶ: ಎಡಿಜಿಪಿ ಅಲೋಕ್ ಕುಮಾರ ವಿರುದ್ಧ ವಾಗ್ದಾಳಿ ನಡೆಸಿದ ವಿ.ಶಶಿಧರ, ಇವರು ಖಾಕಿ ಬಟ್ಟೆ ಹಾಕೊಂಡು ಏನೆಲ್ಲಾ ಮಾಡ್ತಿದಾರೆ ಎಂಬುದು ಇಡೀ ವ್ಯವಸ್ಥೆಗೆ ಗೊತ್ತಿದೆ, ಪೊಲೀಸ್ ಸಂಘಟನೆ ಎಂಬುದು ಪೊಲೀಸ್ ಇಲಾಖೆಯಲ್ಲಿ ಸುಧಾರಣೆ ತರಲು ದಿಟ್ಟ ಹೆಜ್ಜೆ ಇಟ್ಟಿರುವ ಸಂಘಟನೆ ಎಂದರು.
ಕಾಲ್ ಡಿಟೈಲ್ಸ್ ಸಂಗ್ರಹ ಆರೋಪ: ನನ್ನ ಹಾಗೂ ನನ್ನ ಕುಟುಂಬ, ಆಪ್ತರ ಕಾಲ್ ಡಿಟೇಲ್ಸ್ ಯಾರಿಗೂ ನೀಡಬಾರದೆಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು ಸೋಮವಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿದ್ದಾರೆ. "ನನ್ನ ಕ್ಷೇತ್ರ ಬಬಲೇಶ್ವರದಲ್ಲಿ ಕೆಲವರು ದುರುದ್ದೇಶದಿಂದ ಬೇರೆ ಬೇರೆ ಜಿಲ್ಲೆಗಳಲ್ಲಿ ಕಾಲ್ ಹಿಸ್ಟರಿ ತೆಗೆಸುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ಕಲಬುರಗಿ ಹಾಗೂ ಇತರೆ ಜಿಲ್ಲೆಗಳಲ್ಲಿ ಕಾಲ್ ಹಿಸ್ಟರಿ ತೆಗೆಸಲಾಗುತ್ತಿದೆ. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಮ್ಮ ವಿರೋಧಿಗಳು ಈ ಕೃತ್ಯ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಹೊರ ದೇಶದಲ್ಲಿ ಚಿಕ್ಕಮಕ್ಕಳಂತೆ ದೇಶದ ವಿರುದ್ಧ ಹೇಳಿಕೆ ನೀಡುವುದು ಸರಿಯಲ್ಲ: ಬಿಎಸ್ವೈ