ವಿಜಯಪುರ : ಗೃಹ ಸಚಿವ ಎಂ.ಬಿ ಪಾಟೀಲ್ ಹಾಕಿದ ಧಮ್ಕಿಗೆ ನಾನು ಹೆದರಲ್ಲ. ತನ್ನ ಬೆಂಬಲಿಗರನ್ನ ಛೂಬಿಟ್ಟು ಈ ರೀತಿಯಾಗಿ ನಡೆದುಕೊಂಡಿದ್ದು ನಾನು ಸಹಿಸುವುದಿಲ್ಲ. ತಮ್ಮ ನಿಜವಾದ ಬಣ್ಣ ಬಯಲು ಮಾಡುವವರೆಗೂ ನಾನು ಸುಮ್ಮನಿರಲ್ಲ ಅಂತಾ ಮುದ್ದೇಬೀಹಾಳ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರು, ಸಚಿವ ಎಂ.ಬಿ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ಜಿಲ್ಲೆಯ ಖಾಸಗಿ ಹೋಟೆಲ್‌ವೊಂದರಲ್ಲಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಅವರು ನಡೆಸುತ್ತಿದ್ದ ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಎಂ.ಬಿ ಪಾಟೀಲ್ ಬೆಂಬಲಿಗರು ಆಗಮಿಸಿ ದಾಂಧಲೆ ಮಾಡಿದ್ದರು. ಅಷ್ಟೇ ಅಲ್ಲದೆ ಅವರಿಗೆ ಜೀವಬೆದರಿಕೆ ಕೂಡ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಇಂದು ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ, ಎಂ.ಬಿ ಪಾಟೀಲ್ ಅವರ ಈ ವರ್ತನೆಯನ್ನು ಖಂಡಿಸಿ ತಮ್ಮ ನಿವಾಸದಲ್ಲಿ ಮಾಧ್ಯಮಗೋಷ್ಠಿ ಕರೆದು ತಮ್ಮ ಮುಂದಿನ ಹೋರಾಟದ ಬಗ್ಗೆ ನಿಲುವು ವ್ಯಕ್ತಪಡಿಸಿದರು.
ಈಗಾಗಲೇ ಎಂ.ಬಿ ಪಾಟೀಲ್ ಅವರ ದುರ್ವರ್ತನೆಯ ಬಗ್ಗೆ ನಮ್ಮ ರಾಜ್ಯ ನಾಯಕರ ಗಮನಕ್ಕೆ ತಂದಿದ್ದೇನೆ. ಅವರು ಕೂಡ ನನ್ನ ಮಾತಿಗೆ ಸ್ಪಂದಿಸಿದ್ದಾರೆ. ಚುನಾವಣೆ ನಂತರ ಅವರು ತೆಗೆದುಕೊಂಡ ನಿರ್ಧಾದಂತೆ ನನ್ನ ಹೋರಾಟ ನಡೆಯಲಿದೆ ಅಂತಾ ತಿಳಿಸಿದರು. ಈ ಘಟನೆಯಲ್ಲಿ ತಪ್ಪು ಎಸಗಿದವರಿಗೆ ಕಾನೂನು ಇಲಾಖೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೆ ಎಂಬ ಭರವಸೆ ನನಗಿದೆ ಎಂದರು.
ಚುನಾವಣೆ ನಂತರ ನೀರಾವರಿ ಕಾಮಗಾರಿಯಲ್ಲಿ ಆದ ಭ್ರಷ್ಟಾಚಾರವನ್ನು ಬಯಲು ಮಾಡುತ್ತೇನೆ. ಅಲ್ಲಿಯವರೆಗೆ ನಮ್ಮ ಕಾರ್ಯಕರ್ತರು ಯಾವುದಕ್ಕೂ ಪ್ರಚೋದನೆಗೊಳಗಾಗದೆ ಸಹನಾಭೂತಿ ಕಾಪಾಡುಕೊಳ್ಳಲಿ ಅಂತಾ ಮನವಿ ಮಾಡಿಕೊಂಡರು.