ವಿಜಯಪುರ: ನಗರದಲ್ಲಿ ಬೆಳ್ಳಂಬೆಳಗ್ಗೆ ಜೆಸಿಬಿಗಳು ಘರ್ಜಿಸಿವೆ. ಅತಿಕ್ರಮಣ ಮಾಡಿಕೊಂಡಿದ್ದ ಸರ್ಕಾರಿ ಜಾಗವನ್ನು ತೆರವುಗೊಳಿಸಲಾಯಿತು.
ನಗರದ ಹೃದಯ ಭಾಗದಲ್ಲಿರುವ ಟಿಪ್ಪು ಸುಲ್ತಾನ್ ಸರ್ಕಲ್ ಬಳಿಯ ಜಾಗದಲ್ಲಿ ಅಕ್ರಮವಾಗಿ ವ್ಯಕ್ತಿಯೊಬ್ಬ ಹೋಟೆಲ್ ಕಟ್ಟಿಕೊಂಡಿದ್ದನು. ಸರ್ಕಾರಿ ಜಾಗ ತೆರವು ಮಾಡದೇ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂಕೋರ್ಟ್ ತೀರ್ಪು ಸರ್ಕಾರದ ಪರವಾಗಿ ಬಂದಿದ್ದು, ಇಷ್ಟಾದರೂ ಸರ್ಕಾರಿ ಜಾಗ ತೆರವು ಮಾಡಿರಲಿಲ್ಲ.
ಇಂದು ಜೆಸಿಬಿ ಮೂಲಕ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಔದ್ರಾಮ್, ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ನೇತೃತ್ವದಲ್ಲಿ ಹೋಟೆಲ್ ತೆರವು ಮಾಡಿದರು. ಹೆಚ್ಚುವರಿ ಪೊಲೀಸ್ ಭದ್ರತೆಯಲ್ಲಿ ತೆರವು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಸರ್ಕಾರಿ ಜಾಗವನ್ನು ತಮ್ಮ ವಶಕ್ಕೆ ಪಡೆದುಕೊಂಡರು.